ಬಳ್ಳಾರಿಯ ಬಿಡಿಎಎ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಚಾರ ಜನ ಸಂಪರ್ಕ ಸಭೆಯಲ್ಲಿ ಎಸ್ಪಿ ಡಾ.ಸುಮನ್ ಡಿ. ಪನ್ನೇಕರ್ ಮಾತನಾಡಿದರು. ಎಎಸ್ಪಿಗಳಾದ ಕೆ.ಪಿ.ರವಿಕುಮಾರ್, ನವೀನ್‌ಕುಮಾರ್, ಪಾಲಿಕೆ ಮೇಯರ್ ಪಿ.ಗಾದೆಪ್ಪ , ಆಯುಕ್ತ ಪಿ.ಎಸ್.ಮಂಜುನಾಥ ಇದ್ದರು.
ಬಳ್ಳಾರಿ : ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಇಲಾಖೆಗಳ, ಆಟೋ, ಲಾರಿ, ಕಿರಾಣಿ ಅಂಗಡಿ, ಬೀದಿಬದಿ ವ್ಯಾಪಾರಸ್ಥರು ಹಾಗೂ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳ ಸಹಕಾರ ಅಗತ್ಯವಿದೆ ಎಂದು ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್ ಹೇಳಿದರು.
ಇಲ್ಲಿನ ಬಿಡಿಎಎ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಸಂಚಾರ ಪೊಲೀಸ್ ಠಾಣೆ ವತಿಯಿಂದ ನಗರದಲ್ಲಿ ದಿನೇದಿನೆ ಹೆಚ್ಚುತ್ತಿರುವ ಸಂಚಾರ ದಟ್ಟಣೆ, ಇದರಿಂದಾಗಿ ಸಾರ್ವಜನಿಕರಿಗೆ ಆಗುವ ಸಮಸ್ಯೆ ಹಾಗೂ ಪರಿಹಾರ ಕುರಿತು ಚರ್ಚಿಸಲು ಆಯೋಜಿಸಿದ್ದ ಸಂಚಾರ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು. ನಗರದಲ್ಲಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಮಾರ್ಗ ಕಂಡುಕೊಂಡು ಸೂಕ್ತ ಕ್ರಿಯಾಯೋಜನೆ ರೂಪಿಸಿ ಸಾರ್ವಜನಿಕ ಓಡಾಟಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ನಗರದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಜಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಸ್ವಯಂ ಪ್ರೇರಿತರಾಗಿ ಟ್ರಾಫಿಕ್ ವಾರ್ಡನ್ ಆಗಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.
ಮೇಯರ್ ಪಿ.ಗಾದೆಪ್ಪ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ವೃತ್ತ, ಬಡಾವಣೆಗಳಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. ಇದಕ್ಕೆ ಎಲ್ಲರ ಸಹಕಾರವೂ ಅಗತ್ಯವಿದೆ ಎಂದರು.
ನಗರದಲ್ಲಿ ಆಟೋ ಚಾಲಕರು ನಿಧಾನಗತಿಯಲ್ಲಿ ವಾಹನ ಚಲಾಯಿಸಬೇಕು. ತತ್‌ಕ್ಷಣ ಬ್ರೇಕ್ ಹಾಕುವುದು, ಹಿಂಬದಿ ಸವಾರರಿಗೆ ತೊಂದರೆ ಉಂಟುಮಾಡುವುದು ಮಾಡಬಾರದು. ಹಾಗಾಗಿ ನಿಧಾನಗತಿಯಲ್ಲಿ ವಾಹನ ಚಲಾವಣೆ ಮಾಡಬೇಕು ಎಂದರು.
ನಗರದಲ್ಲಿ ವಿವಿಧ ಬಡಾವಣೆಗಳ ಮುಖ್ಯರಸ್ತೆಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಇವುಗಳಿಗೆ ವೇಗ ನೀಡಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಸಭೆಯಲ್ಲಿ ತಿಳಿಸಿದರು.