- ಪ್ರಮುಖ ನಾಯಕರು ಅರ್ಜಿ ಸಲ್ಲಿಕೆ
- ಯಾರಿಗೆ ಒಲಿಯಲಿದೆ ಎಂಬ ಚರ್ಚೆ
ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಬಲಗೊಳಿಸಲು ಉದ್ದೇಶಿಸಿರುವ ಕಾಂಗ್ರೆಸ್ ಹೈಕಮಾಂಡ್ ಜಿಲ್ಲಾಘಟಕಗಳ ಅಧ್ಯಕ್ಷರ ಬದಲಾವಣೆಗೆ ಮುಂದಾಗಿದೆ. ಅದರಂತೆ, ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರ ಪ್ರಕ್ರಿಯೆ ಆರಂಭಗೊಂಡಿದೆ. ಜತೆಗೆ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಜಿಲ್ಲಾ ಉಸ್ತುವಾರಿಯಾಗಿ ನೇಮಕಗೊಳ್ಳುತ್ತಿದ್ದಂತೆ ಗರಿಗೆದರಿದೆ.
ಈ ಮೊದಲು ಜಿಲ್ಲಾಮಟ್ಟದ ಪ್ರಭಾವಿ ನಾಯಕರೇ ಜಿಲ್ಲಾ ಘಟಕದ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಿದ್ದರು. ಆದರೆ, ಈಗ ಪಕ್ಷದಲ್ಲಿ ಬದಲಾವಣೆ ತರಲಾಗಿದೆ. ಕಾರ್ಯಕರ್ತರು, ಸ್ಥಳೀಯ ಮುಖಂಡರು, ಪಕ್ಷದ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ಸೇರಿದಂತೆ ಪ್ರತಿಯೊಬ್ಬರ ಅಭಿಪ್ರಾಯಪಡೆದು ಎಲ್ಲ ಜಾತಿ ಧರ್ಮಗಳ ಜನರನ್ನು ಒಟ್ಟಾಗಿ ಕರೆದ್ಯೋಯುವ ಸಮರ್ಥ ವ್ಯಕ್ತಿಗೆ ಜಿಲ್ಲಾ ಘಟಕದ ಚುಕ್ಕಾಣಿ ನೀಡುವ ಉದ್ದೇಶ ಹೊಂದಲಾಗಿದೆ.
ಸಂಘಟನಾ ಸೃಜನ್ ಅಭಿಯಾನದ ಅಡಿಯಲ್ಲಿ ಎಐಸಿಸಿ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ನದೀಮ್ ಜಾವೀದ್, ಕೆಪಿಸಿಸಿ ಉಪಾಧ್ಯಕ್ಷ ಎ.ಆರ್.ಎಂ. ಹುಸೇನ್, ಕೆಪಿಸಿಸಿ ವಕ್ತಾರರಾದ ಶೈಲಜಾ ಹಿರೇಮಠ, ರಾಜಶೇಖರ್ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈಗಾಗಲೇ ಬಳ್ಳಾರಿ ನಗರ, ಗ್ರಾಮೀಣ, ಸಿರಗುಪ್ಪ, ಸಂಡೂರು, ಕಂಪ್ಲಿ, ಕುರುಗೋಡು ಕ್ಷೇತ್ರಗಳಲ್ಲಿ ಅಭಿಪ್ರಾಯ ಸಂಗ್ರಹಿಸಿ ಸ್ಥಳೀಯ ನಾಯಕರ ಜತೆ ಚರ್ಚಿಸಿ ಸಭೆ ನಡೆಸಿ ಹೊರಟಿದ್ದಾರೆ. ಪ್ರಸ್ತುತ ಇರುವ ಅಧ್ಯಕ್ಷರು ಮುಂದುವರಿಯಬೇಕೇ, ಬೇಡವೇ ಮುಂದೆ ಯಾರಾಗಬೇಕು ? ಎಂಬುದರ ಕುರಿತು ಕಾರ್ಯಕರ್ತರು, ಮುಖಂಡರು ನೇರವಾಗಿ ಅಥವಾ ಫಾರ್ಮ್ ಭರ್ತಿ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ಮಾಹಿತಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಲುಪಲಿದೆ. ಆ.17ರಂದು ನೂತನ ಜಿಲ್ಲಾಧ್ಯಕ್ಷರ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ.
ಪ್ರಬಲರು ಪೈಪೋಟಿ : ಸದ್ಯ, ಮುಂಬರುವ ಕೆಲ ತಿಂಗಳಲ್ಲಿ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆ ನಡೆಯುವ ಸಾಧ್ಯತೆಯಿರುವುದರಿಂದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಜೋರಾಗಿದೆ. ಮಹಾನಗರ ಪಾಲಿಕೆಯ ಹಾಲಿ ಮೇಯರ್ ಪಿ.ಗಾದೆಪ್ಪ, ಬುಡಾ ಅಧ್ಯಕ್ಷ ಜೆ.ಎಸ್. ಆಂಜನೇಯಲು, ಮುಖಂಡರಾದ ವೆಂಕಟೇಶ್ ಹೆಗಡೆ, ಬೆಣಕಲ್ ಬಸವರಾಜ್, ಎಂ.ಎಸ್.ಮಂಜುಳಾ, ಬೋಯಪಾಟಿ ವಿಷ್ಣು, ಬಿ.ಎಂ.ಪಾಟೀಲ್, ಅಯ್ಯದ್ ಅಹಮ್ಮದ್, ಎಸ್.ನಾಗರಾಜ ಸೇರಿದಂತೆ ಹಲವರು ಎಐಸಿಸಿ ನಾಯಕರಿಗೆ ಮನವಿ ಸಲ್ಲಿಸಿದ್ದಾರೆ. ಜತೆಗೆ ಹಾಲಿ ಅಧ್ಯಕ್ಷ ಅಲ್ಲಂ ಪ್ರಶಾಂತ್ ಕೂಡ ಜಿಲ್ಲಾಧ್ಯಕ್ಷ ಸ್ಥಾನದಿಂದ ಮುಂದುವರಿಸುವಂತೆ ಕೋರಿದ್ದಾರೆ. ಇದಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ನೇಮಕಗೊಳ್ಳುತ್ತಿದ್ದಂತೆ ಅವರ ಬೆಂಬಲಿಗರು ಕೂಡ ಈ ಸ್ಥಾನಕ್ಕೆ ತೆರೆಮರೆಯಲ್ಲಿ ಕಸರತ್ತು ನೆಡೆಸುತ್ತಿದ್ದಾರೆ. ಇನ್ನೂ ಪಕ್ಷವೂ ನಿಷ್ಟಾವಂತ ಕಾರ್ಯಕರ್ತನಿಗೆ ಮಣೆ ಹಾಕಲಿದಯೂ ಅಥವಾ ಹಣ, ರಾಜಕೀಯ ಬಲ ಹಾಗೂ ಜಾತಿ ಲೆಕ್ಕಚಾರ ಮಾಡಿ ಸ್ಥಾನ ನೀಡಲಿದೆ ಎಂಬುದರ ಜತೆಗೆ ಹಾಲಿ ಅಧ್ಯಕ್ಷನನ್ನೇ ಮುಂದುವರಿಸಲಿದೆ ಎಂಬುದು ಕಾದು ನೋಡಬೇಕಿದೆ.
ಬುಡಾ ಅಧ್ಯಕ್ಷ ಸ್ಥಾನಕ್ಕೂ ಪೈಪೋಟಿ : ನಿಗಮ, ಮಂಡಳಿಗಳಿಗಳ ಅಧ್ಯಕ್ಷರಾಗಿರುವ ರಾಜೀನಾಮೆ ನೀಡುವಂತೆ ಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ಬೆನ್ನಲ್ಲೇ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಬುಡಾ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ನಿಷ್ಠೆಗಿಂತ ರಾಜಕೀಯ ನಾಯಕರ ಬೆಂಬಲಿಗರು ಹಾಗೂ ಹಣದ ಬಲ ಇರುವುವರಿಗೆ ಸ್ಥಾನ ದೊರೆಯುವ ಸಾಧ್ಯತೆ ದಟ್ಟತೆಯಿರುವುದಿಂದ ಜಿಲ್ಲೆಯ ಪ್ರಮುಖರು ಬೆಂಗಳೂರಿನಲ್ಲಿ ಉಳಿದು ಸಮುದಾಯದ ಸಚಿವರು, ನಾಯಕರು ಮೂಲಕ ಸಿಎಂಗೆ ಒತ್ತಡ ಹೇರುತ್ತಿದ್ದಾರೆ ಎಂಬುದಾಗಿ ಮೂಲಗಳ ತಿಳಿಸಿದವು. ಅಲ್ಲದೆ, ಸ್ಥಳೀಯ ಶಾಸಕ, ಸಚಿವರ ಬೆಂಬಲ ಪಡೆದವರಿಗೆ ಸ್ಥಾನ ದೊರೆಯಲಿದೆ ಎಂಬುದು ಮನಗಂಡು ಸಚಿವರ ಹಿಂದಯೇ ಕೆಲವರು ಒಡನಾಟ ಆರಂಭಿಸಿದ್ದಾರೆ.
ಕೋಟ್... ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಎಐಸಿಸಿ ನಾಯಕರು ಜಿಲ್ಲಾಧ್ಯಕ್ಷ ಅಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಿಸಿದ್ದಾರೆ. ನನ್ನನ್ನು ಮುಂದುವರಿಸುವುದು ಅಥವಾ ಬದಲಾವಣೆ ಮಾಡುವುದು ಪಕ್ಷದ ನಿರ್ಧಾರ. ಪಕ್ಷ ಏನೇ ನಿರ್ಣಯ ತೆಗೆದುಕೊಂಡರು ಅದಕ್ಕೆ ಬದ್ಧನಾಗಿರುವೆ.- ಅಲ್ಲಂ ಪ್ರಶಾಂತ್, ಜಿಲ್ಲಾಧ್ಯಕ್ಷ, ಕಾಂಗ್ರೆಸ್, ಬಳ್ಳಾರಿ.