ಕಂಪ್ಲಿಯಲ್ಲಿ ಶಾಸಕ ಜೆ.ಎನ್.ಗಣೇಶ್‌ಗೆ ಅತಿಥಿ ಉಪನ್ಯಾಸಕರ ಸಂಘದಿಂದ ಮನವಿ ಸಲ್ಲಿಸಲಾಯಿತು.
ಕಂಪ್ಲಿ: ಅತಿಥಿ ಉಪನ್ಯಾಸಕರ ಮಾಸಿಕ ಗೌರವಧನವನ್ನು 14ರಿಂದ 30 ಸಾವಿರ ರೂಪಾಯಿಗೆ ಹೆಚ್ಚಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತಬೇಕೆಂದು ಆಗ್ರಹಿಸಿ ಶಾಸಕ ಜೆ.ಎನ್.ಗಣೇಶ್‌ಗೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು.
ಸಂಘಟನೆಯ ಜಂಟಿ ಕಾರ್ಯದರ್ಶಿ ಎಸ್.ಜಿ.ನಾಗರತ್ನಾ ಮಾತನಾಡಿ, ಸೇವಾ ಹಿರಿತನ ಪರಿಗಣಿಸಿ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ಮುಂದುವರಿಸಬೇಕು. ಅತಿಥಿ ಉಪನ್ಯಾಸಕಿಯರಿಗೆ ಹೆರಿಗೆ ಸಂದರ್ಭದಲ್ಲಿ ಸರ್ಕಾರಿ ಉಪನ್ಯಾಸಕರಿಗೆ ನೀಡಲಾಗುವ ಸೌಲಭ್ಯಗಳನ್ನು ಕಲ್ಪಿಸಬೇಕು. ಕಾರ್ಯಭಾರ ಕಡಿಮೆ ಇರುವ ಕಾಯಂ ಉಪನ್ಯಾಸಕರನ್ನು ನಿಯೋಜಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ವಿದ್ಯಾರ್ಥಿಗಳ ದಾಖಲಾತಿ, ಕಾಲೇಜಿನ ಕೆಲಸಗಳನ್ನು ನಿರ್ವಹಿಸುವುದರೊಂದಿಗೆ ಉತ್ತಮ ಫಲಿತಾಂಶ ಪಡೆಯುವಲ್ಲಿ ಅತಿಥಿ ಉಪನ್ಯಾಸಕರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಕಂಪ್ಲಿ, ಕುರುಗೋಡು ಭಾಗದ ಎಲ್ಲ ಅತಿಥಿ ಉಪನ್ಯಾಸಕರ ಸಭೆ ಕರೆದು ಸಮಸ್ಯೆಗಳ ಮಾಹಿತಿ ಪಡೆದು ಪರಿಹರಿಸಲು ಸಂಬಂಧಿಸಿ ಅಧಿಕಾರಿಗಳು, ಸಚಿವರೊಂದಿಗೆ ಚರ್ಚಿಸುವೆ ಹಾಗೂ ಅಧಿವೇಶದಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು. ಪದಾಧಿಕಾರಿಗಳಾದ ಬಿ.ಕೆ.ಜಡೆಪ್ಪ, ಕಾಶೀಮಪ್ಪ, ಅಂಗಡಿ ನಿರಂಜನ, ಗಜೇಂದ್ರ, ಜಿ.ಶಿವಕುಮಾರ್ ಇತರರಿದ್ದರು.