ಆರ್.ಅಶೋಕ್ 
ಬಳ್ಳಾರಿ

ರೆಡ್ಡಿ ಹತ್ಯೆಗೆ ಕಾಂಗ್ರೆಸ್ ಸಂಚು

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಅಂಗರಕ್ಷಕ
  • ದೀಪಾವಳಿ
  • ಕಾರ್ಯಕ್ರಮ
ಬಳ್ಳಾರಿ : ನಗರ ಡಿವೈಎಸ್ಪಿ ಬೆಂಗಾವಲಿನಿಂದ ಶಾಸಕ ನಾರಾ ಭರತರೆಡ್ಡಿ ಸೇರಿ ಸಾವಿರಾರು ಬೆಂಬಲಿಗರೊಂದಿಗೆ ಶಾಸಕ ಜಿ.ಜನಾರ್ದನರೆಡ್ಡಿ ಮೇಲೆ ದಾಳಿಗೆ ಯತ್ನಸಿದ್ದು, ರೆಡ್ಡಿ ಹತ್ಯೆಗೆ ಕಾಂಗ್ರೆಸ್ ಸಂಚು ರೂಪಿಸಿತ್ತು ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಂಗಳೂರಲ್ಲಿ ಪೊಲೀಸರಿಂದಲೇ ಕೋಟ್ಯಾಂತರ ರೂ. ದರೋಡೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಪೊಲೀಸರ ನೇತೃತ್ವದಲ್ಲೇ ಶಾಸಕನ ಮೇಲೆ ಹತ್ಯೆಗೆ ಯತ್ನ ನಡೆದಿದೆ. ಘರ್ಷಣೆಯಲ್ಲಿ ಪೊಲೀಸರು ಇದ್ದರೂ ಕೂಡ ಶಾಸಕ ನಾರಾಭರತರೆಡ್ಡಿಯ ಖಾಸಗಿ ಅಂಗರಕ್ಷಕರು ದೀಪಾವಳಿಯಲ್ಲಿ ಪಟಾಕಿ ಹಾರಿಸಿದಂತೆ ಬಂದೂಕಿನಿಂದ ಗುಂಡು ಹಾರಿಸುತ್ತಿದ್ದಾರೆ. ರಾಜ್ಯದಲ್ಲಿ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಿಗೆ ಮಾರ್ಪಾಟ್ಟಿವೆ ಎಂದರು.
ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕಾಗಿ ಬಿಜೆಪಿ ಶಾಸಕರ, ಪ್ರಧಾನಿ ನರೇಂದ್ರ ಮೋದಿ ಮನೆ ಮುಂಭಾಗದಲ್ಲಿ ಬ್ಯಾನರ್ ಕಟ್ಟಲಿ ಅಭ್ಯಂತರವಿಲ್ಲ. ಆದರೆ, ಶಾಸಕರ ಮನೆಯ ಕೌಂಪೌಂಡ್‌ನಲ್ಲಿ ಕಟ್ಟಬಾರದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ತೀರುಗೇಟು ನೀಡಿದರು.
ಶಾಸಕ ನಾರಾ ಭರತರೆಡ್ಡಿ ದೇಶದ ಪ್ರಧಾನಿ ಎಂಬಂತೆ ನಾಲ್ವರ ಗನ್‌ಮ್ಯಾನ್‌ಗಳ ಇಟ್ಟುಕೊಂಡು ಗೊಂಡಾ ರಾಜಕಾರಣ ಮಾಡುತ್ತಿದ್ದಾರೆ. ಈ ಹಿಂದೆ ನೆರೆಯ ಆಂಧ್ರ ರಾಜ್ಯ ವೈಲೆಂಟ್ ಎನ್ನುತ್ತಿದ್ದರು. ಈಗ ಆಂಧ್ರ ಶಾಂತಿಯಾಗಿದ್ದು, ರಾಜ್ಯದಲ್ಲಿ ವೈಲೆಂಟ್ ಶುರುವಾಗಿದೆ. ಡ್ರಗ್ಸ್ ,ದರೋಡೆ ಇದರ ನಡುವೆ ಕಾಂಗ್ರೆಸ್ ಶಾಸಕರ ಗನ್‌ಮ್ಯಾನ್‌ಗಳಿಂದ ದಾಳಿ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ.
ಕೆಪಿಸಿಸಿಯ ಸತ್ಯ ಶೋಧನ ಸಮಿತಿಗೆ ಘರ್ಷಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಎಸೆದ ಕಲ್ಲು ಮತ್ತು ಬಿಯರ್ ಬಾಟಲಿಗಳು ಸಿಕ್ಕಿವೆ. ಸಮಿತಿಯೂ ಅಪ್ಪಟ ಸುಳ್ಳು ವರದಿ ನೀಡಲಿದೆ. ಯಲಹಂಕ ಲೇಔಟ್‌ನ ಕೋಗಿಲೆಯ ಅಕ್ರಮವಾಸಿಗಳಿಗೆ ವಸತಿ ಹಂಚಿಕೆ ಹಾಗೂ ಶಾಸಕ ಜಿ.ಜನಾರ್ದನರೆಡ್ಡಿ ಮೇಲೆ ದಾಳಿ ಖಂಡಿಸಿ ಬೆಂಗಳೂರಿನಲ್ಲಿ ಜ.5ರಂದು ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದರು.
ಕಾಂಗ್ರೆಸ್‌ಗೆ ರಾಮ ಕಂಡರೆ ಆಗಲ್ಲ. ಇನ್ನೂ ರಾಮಾಯಣ ಬರೆದಿರುವ ವಾಲ್ಮೀಕಿನ ಹೇಗೆ ಇಷ್ಟ ಪಡತ್ತಾರೆ ?. ರಾಜ್ಯದಲ್ಲಿ ಗುಪ್ತಚಾರ ಇಲಾಖೆ ಸತ್ತು ಹೋಗಿದೆ. ಪ್ರಕರಣ ಸಿಒಡಿಗೆ ವಹಿಸಿದರೆ ನಂಬಿಕೆಯಿಲ್ಲ. ಆದ್ದರಿಂದ, ನ್ಯಾಯಾಂಗ ತನಿಖೆ ಹಾಗೂ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.