ಕಂಪ್ಲಿ ಸಮೀಪದ ಅರಳಿಹಳ್ಳಿ ತಾಂಡದಲ್ಲಿ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು. 
ಬಳ್ಳಾರಿ

ಮುಂದಿನ ವರ್ಷ ಕಂಪ್ಲಿ ಉತ್ಸವ ಆಯೋಜನೆ: ಶಾಸಕ ಜೆ.ಎನ್.ಗಣೇಶ್ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • 2026ರ ಫೆಬ್ರವರಿಯಲ್ಲಿ ಕಂಪ್ಲಿ ಉತ್ಸವ
  • ನ.10ರ ನಂತರ ಕಂಪ್ಲಿಯಲ್ಲಿ ಒಬಿಸಿ ವಸತಿ ನಿಲಯ
  • ಮುರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣ
ಕಂಪ್ಲಿ: ಯುವಜನತೆಗೆ ಅಧಿಕಾರ ನೀಡಿ ಬದಲಾವಣೆಗೆ ಅವಕಾಶ ಮಾಡಿಕೊಡುವುದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಆಶಯವಾಗಿದ್ದು, ರಾಜ್ಯ ಸಚಿವ ಸಂಪುಟದಲ್ಲಿ ಯುವಕರಿಗೆ ಸಚಿವ ಸ್ಥಾನ ನೀಡಲಿ ಎಂದು ಶಾಸಕ ಜೆ.ಎನ್.ಗಣೇಶ್ ಆಗ್ರಹಿಸಿದರು.
ತಾಲೂಕಿನ ಅರಳಿಹಳ್ಳಿ ತಾಂಡದಲ್ಲಿ 16 ಕೋಟಿ ರೂ.ವೆಚ್ಚದಲ್ಲಿ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು. ಹಿರಿಯ ಶಾಸಕರಿಗೆ ಸಚಿವ ಸ್ಥಾನ ದೊರಕಿದ್ದು ಯುವಕರಿಗೆ ಅವಕಾಶ ದೊರೆಯಬೇಕಿದೆ ಎಂದು ಹೇಳಿದರು.
ನ.10ರ ನಂತರ ಕಂಪ್ಲಿಯಲ್ಲಿ ಒಬಿಸಿ ವಸತಿ ನಿಲಯ, ಮುರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣ, ಕುರುಗೋಡಿನಲ್ಲಿ ಗಾಂಧಿತತ್ವ ಶಾಲೆ ಮತ್ತು ಮುರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. 2026ರ ಫೆಬ್ರವರಿಯಲ್ಲಿ ಕಂಪ್ಲಿ ಉತ್ಸವ ನಡೆಸಲು ಯೋಚಿಸಲಾಗಿದೆ ಎಂದರು.
ಧರ್ಮಗುರುಗಳಾದ ಸೈಯದ್ ಷಾ ಅಬುಲ್ ಹಸನ್‌ಖಾದ್ರಿ, ಡಾ.ಸೈಯದ್ ಷಾ ನೂರ್ ಅಹ್ಮದ್ ಖಾದ್ರಿ, ಸೈಯದ್ ಷಾ ಕರಿಮುಲ್ಲಾ ಖಾದ್ರಿ, ಪ್ರಮುಖರಾದ ಕೆ.ಶ್ರೀನಿವಾಸಪ್ಪ, ಪಿ.ಮೂಕಯ್ಯಸ್ವಾಮಿ, ಕೆ.ಮಸ್ತಾನ್ ವಲಿ, ಕೆ.ಎಸ್.ಚಾಂದ್ ಬಾಷಾ, ಎನ್.ಹಬೀಬ್ ರೆಹಮಾನ್, ಹನುಮಂತಪ್ಪ, ಕನಕಪ್ಪ ಸುಣಗಾರ್, ಕೆ.ರೇಣುಕಪ್ಪ, ಕೆ.ರಮೇಶ, ಕರ್ನಾಟಕ ಗೃಹ ಮಂಡಳಿ ಇಇ ವಸಂತಕುಮಾರಿ, ಎಇಇ ಬಸವರಾಜ, ಎಇ ತನುಜೇಂದ್ರ ಪಟೇಲ್, ಪ್ರಾಚಾರ್ಯ ಬಸವರಾಜ, ನಿಲಯ ಪಾಲಕ ಮಲ್ಲಪ್ಪ ಇತರರಿದ್ದರು.