ಬಳ್ಳಾರಿಯ ಹೋಟೆಲ್ ವೊಂದರಲ್ಲಿ ಮಹಿಳಾ ಸಿಬ್ಬಂದಿ ಕಟ್ಟಿಗೆ ಸೌಧೆಯಿಂದ ಬೆಂಕಿ ಹಚ್ಚಿಸಲು ಯತ್ನಿಸಿದರು 
ಬಳ್ಳಾರಿ

ನಗರದಲ್ಲಿ ವಾಣಿಜ್ಯ ಅನಿಲ ಅಭಾವ

ಪ್ರಮುಖ ಮುಖ್ಯಾಂಶಗಳು

  • ಅಭಾವ
ಬಳ್ಳಾರಿ : ನಗರದಲ್ಲಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ ತೀವ್ರ ಅಭಾವ ಗುರುವಾರ ಸೃಷ್ಟಿಯಾಗಿದೆ. ಹೋಟೆಲ್ ಉದ್ಯಮಿಗಳು ಅಡುಗೆ ತಯಾರಿಕೆಗಾಗಿ ಅನಿಲ ಬದಲಾಗಿ ಸಾಂಪ್ರದಾಯಿಕ ಕಟ್ಟಿಗೆ ಸೌದೆ ಹಾಗೂ ಭತ್ತದ ತೌಡಿನ ಒಲೆಗಳತ್ತ ಮುಖ ಮಾಡಿದ್ದಾರೆ.
​​ಇಲ್ಲಿನ ಜನತಾ ಹೋಟೆಲ್, ದಾವಣಗೆರೆ ಬೆಣ್ಣೆ ದೋಸೆ ಸೇರಿದಂತೆ ಹಲವು ಕಡೆಗಳಲ್ಲಿ ಅಡುಗೆ ತಯಾರಿಸಲು ಗ್ಯಾಸ್ ಬದಲಾಗಿ ಭತ್ತದ ತೌಡು ಹಾಗೂ ಹೊಟ್ಟು ಬಳಸಲಾಗುತ್ತಿದೆ. ಆದರೆ, ಇದು ತಾತ್ಕಾಲಿಕ ಪರಿಹಾರವೇ ಹೊರತು ಸುಸ್ಥಿರವಲ್ಲ ಎಂಬಂತೆಯಾಗಿದೆ. ಗ್ಯಾಸ್ ಒಲೆಗಳ ವೇಗಕ್ಕೆ ಹೊಂದಿಕೊಂಡಿರುವ ಅಡುಗೆ ಸಿಬ್ಬಂದಿಗೆ ಗ್ಯಾಸ್ ನಿಂದ ಕೆಲಸ ಮಾಡುವುದು ಸವಾಲಾಗಿದೆ. ಟೀ, ಕಾಫಿ, ಪೂರಿ ಹಾಗೂ ದೋಸೆಯಂತಹ ತಿಂಡಿಗಳನ್ನು ಸೌದೆ ಒಲೆಯ ಮೇಲೆ ಸಿದ್ಧಪಡಿಸುವುದು ಅಸಾಧ್ಯವಾಗಿದೆ. ಈಗಾಗಲೇ ಹಲವು ಹೋಟೆಲ್‌ಗಳಲ್ಲಿ ಪೂರಿ ತಯಾರಿಸುವುದನ್ನು ನಿಲ್ಲಿಸಲಾಗಿದೆ. ಅನಿಲ ಪೂರೈಕೆ ಹೀಗೆಯೇ ಮುಂದುವರೆದರೆ ಕಾಫಿ-ಟೀ ಕೂಡ ಬಂದ್ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ.
ಕೇಂದ್ರ ಸರ್ಕಾರವು ಹೋಟೆಲ್‌ಗಳಿಗೆ ಅನಿಲ ಪೂರೈಕೆ ಸಾಧ್ಯವಿಲ್ಲ ಎಂಬುದಾಗಿ ಹೇಳಿರುವುದು ಉದ್ಯಮಿಗಳನ್ನು ಆತಂಕಕ್ಕೆ ತಳ್ಳಿದೆ. ಹೋಟೆಲ್ ಉದ್ಯಮವು ಸಾವಿರಾರು ಕುಟುಂಬಗಳಿಗೆ ಜೀವನೋಪಾಯವಾಗಿದೆ. ಈ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸರ್ಕಾರವು ಕನಿಷ್ಠ ಶೇ. 50% ರಷ್ಟಾದರೂ ವಾಣಿಜ್ಯ ಸಿಲಿಂಡರ್ ಪೂರೈಕೆ ಮಾಡಬೇಕು ಎಂದು ಮಾಲೀಕರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಜಿಲ್ಲೆಯ ಹೋಟೆಲ್ ಉದ್ಯಮ ಸಂಪೂರ್ಣವಾಗಿ ಕುಸಿಯುವ ಭೀತಿ ಎದುರಾಗಿದೆ. ಅಲ್ಲದೇ, ನಗರದ ಎಂ.ಜಿ. ವೃತ್ತದಲ್ಲಿನ ಕೆಲ ಹೋಟೆಲ್ ಗಳು ಗ್ಯಾಸ್ ಅಭಾವದಿಂದ ಬಂದ್ ಯಾಗಿದ್ದವು.
ಕೋಟ್.... ನಾವು ಈಗಾಗಲೇ ಗ್ಯಾಸ್ ಒಲೆಗಳಿಗೆ ಹೊಂದಿಕೊಂಡಿದ್ದೇವೆ. ಕಟ್ಟಿಗೆ ಅಥವಾ ತೌಡಿನ ಒಲೆಗಳನ್ನು ದೀರ್ಘಕಾಲದವರೆಗೆ ಬಳಸಲು ಸಾಧ್ಯವಿಲ್ಲ. ಇದರಿಂದ ಕೆಲಸದ ವೇಗ ಕಡಿಮೆಯಾಗುವುದಲ್ಲದೆ, ಗ್ರಾಹಕರಿಗೆ ಸಕಾಲದಲ್ಲಿ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ.
— ಮಧುಸೂದನ್, ಜಿಲ್ಲಾಧ್ಯಕ್ಷ, ಹೋಟೆಲ್ ಸಂಘ, ಬಳ್ಳಾರಿ.