ಬಳ್ಳಾರಿಯ ಎಸ್‌ಎಸ್‌ಎ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ಚಿಕಿತ್ಸೆ ಮತ್ತು ಪ್ರಕೃತಿ ವಿಕೋಪ ನಿರ್ವಹಣೆ ವಿಶೇಷ ಕಾರ್ಯಗಾರವನ್ನು ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್ ಉದ್ಘಾಟಿಸಿದರು. ಬಿಜೆಪಿ ಮುಖಂಡ ಡಾ.ಎಸ್.ಜೆ.ವಿ. ಮಹಿಪಾಲ್, ಪ್ರಾಂಶುಪಾಲ ಡಾ.ಪ್ರಹ್ಲಾದ್ ಚೌದ್ರಿ, ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿ ಡಾ.ಪಲ್ಲವಿ, ಪ್ರೊ.ಗುರುಬಸಪ್ಪ ಇದ್ದರು. 
ಬಳ್ಳಾರಿ

ವಿಪತ್ತು ವೇಳೆ ಕಾರ್ಯ ಶ್ಲಾಘನೀಯ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಶ್ಲಾಘನೀಯ
ಬಳ್ಳಾರಿ : ತುರ್ತು ಪರಿಸ್ಥಿತಿ ಹಾಗೂ ವಿಪತ್ತು ಸಂದರ್ಭದಲ್ಲಿ ರೆಡ್‌ಕ್ರಾಸ್ ಮತ್ತು ರೇಂಜರ್ಸ್, ರೋವರ್ಸ್‌ಗಳ ಪಾತ್ರ ತುಂಬಾ ಅಮೂಲ್ಯವಾದುದು ಎಂದು ಎಸ್ಪಿ ಡಾ.ಸುಮನ್ ಡಿ. ಪನ್ನೇಕರ್ ಹೇಳಿದರು.
ಇಲ್ಲಿನ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಸ್ವಯಂ ಸೇವಕರಿಗಾಗಿ ಆಯೋಜಿಸಿದ್ದ ಪ್ರಥಮ ಚಿಕಿತ್ಸೆ ಮತ್ತು ಪ್ರಕೃತಿ ವಿಕೋಪ ನಿರ್ವಹಣೆ ವಿಶೇಷ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ಪ್ರಥಮ ಚಿಕಿತ್ಸೆಯು ರೋಗಿಗೆ ತಕ್ಷಣದ ವೈದ್ಯಕೀಯ ನೆರವು ನೀಡಿದರೆ ವಿಕೋಪ ನಿರ್ವಹಣೆಯು ಪಾರುಗಾಣಿಕೆ ಮತ್ತು ಚೇತರಿಕೆಯ ಮೂಲಕ ಪ್ರಾಣಹಾನಿ ಕಡಿಮೆ ಮಾಡುತ್ತದೆ ಎಂದರು.
ಹವಾಮಾನ ಇಲಾಖೆಯು ಕಾಲಕಾಲಕ್ಕೆ ಹೊರಡಿಸುವ ಮುನ್ಸೂಚನೆಯ ಮಾಹಿತಿ ಸಾರ್ವಜನಿಕರಿಗೆ ತಿಳಿಸಿದ್ದಲ್ಲಿ ಪ್ರಾಕೃತಿಕ ವಿಕೋಪ ತಡೆಯಬಹುದಾಗಿದೆ. ಜಿಲ್ಲೆಯಂತಹ ಬಿಸಿಲು ಪ್ರದೇಶದಲ್ಲಿ ಬೇಸಿಗೆ ಸಂದರ್ಭದಲ್ಲಿ ಉರಿಬಿಸಿಲಿನಿಂದಾಗುವ ಅನಾಹುತ ತಡೆಯುವ ನಿಟ್ಟಿನಲ್ಲಿ ಜಾಗೃತರಾಗಲು ಸೂಚಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ ಪೋಲಾ ರಾಧಾಕೃಷ್ಣ ಮಾತನಾಡಿ, ಪ್ರಕೃತಿ ವಿಕೋಪ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆಯಾಗಿ ಮಾಹಿತಿ ನೀಡುವುದರ ಜತೆಗೆ ಕ್ರಿಯಾಶೀಲ ಯುವ ಸಮುದಾಯ ಈ ಘಟಕದ ಮೂಲಕ ಸಾಮಾಜಿಕ ಸೇವೆ ಸಲ್ಲಿಸಲು ಮಂದಾಗಿ ಸಾಮಾಜಿಕ ಹೊಣೆಗಾರಿಕೆ ಮೆರೆಯಬೇಕು. ಮಡಿಕೇರಿಯಲ್ಲಿ ಈ ಹಿಂದೆ ಗುಡ್ಡ ಕುಸಿತ ಉಂಟಾಗಿ ನೂರಾರು ಜನ ತೊಂದರೆಗೆ ಈಡಾದ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ನಿರ್ವಹಿಸಿದ ಕಾರ್ಯ ಶ್ಲಾಘನೀಯ ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ. ಶಕೀಬ್ ಮಾತನಾಡಿ, ನಮ್ಮ ಸಂಸ್ಥೆಯು ಯಾವೊತ್ತಿಗೂ ಸಮಾಜಮುಖಿ ಕೆಲಸಗಳೊಂದಿಗೆ ಇರುತ್ತದೆ. ತೊಂದರೆಗೆ ಒಳಗಾದವರಿಗೆ ತಕ್ಷಣಕ್ಕೆ ನೆರವಾಗುವುದರ ಜತೆಗೆ ಸ್ವಯಂಸೇವಕರಿಗೆ ಸ್ಪೂರ್ತಿ, ಮಾರ್ಗದರ್ಶನ ನೀಡುತ್ತದೆ ಎಂದರು. ಕಾಲೇಜು ಪ್ರಾಂಶುಪಾಲ ಡಾ. ಪ್ರಹ್ಲಾದ್ ಚೌದ್ರಿ ಮಾತನಾಡಿದರು.