- ಗ್ರಂಥಗಳ ಲೋಕಾರ್ಪಣೆ
- ಲಲಿತಾ ಸಹಸ್ರನಾಮ ಪಾರಾಯಣ
ಬಳ್ಳಾರಿ : ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೆರೆಯ ಶ್ರೀ ಚರಂತಪ್ಪಜ್ಜ ಮಹಾಸ್ವಾಮೀಜಿಯ 22ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವನ್ನು ಇಲ್ಲಿನ ಬಸವಭವನದಲ್ಲಿ ಜೂ.11ರಿಂದ ಜೂ.13ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗ್ರಂಥಗಳ ಲೋಕಾರ್ಪಣೆ,ಪ್ರದರ್ಶನ, ಉಚಿತ ಕಣ್ಣಿನ ತಪಾಸಣೆ ಚಿಕಿತ್ಸೆ ಹಾಗೂ ರಕ್ತದಾನ, ಹೃದಯ, ಎಲುಬು, ಕೀಲು, ಮೂಳೆಗಳ ತಪಾಸಣೆ ಶಿಬಿರ ನಡೆಯಲಿದೆ. ಜತೆಗೆ ಭರತನಾಟ್ಯ, ಯೋಗ ಥೆರಪಿ, ಸಂಗೀತ, ಹಾಸ್ಯೋತ್ಸವ ಮತ್ತು ಗುರು ಚರಂತಾರ್ಯ ಶ್ರೀಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಜೂ.11ರಂದು ಸಂಜೆ 6.30ಕ್ಕೆ ಅಕ್ಕನ ಬಳಗದಿಂದ ಶ್ರೀಸಿದ್ಧಾಂತ ಶಿಖಾಮಣಿ ಹಾಗೂ ಲಲಿತಾ ಸಹಸ್ರನಾಮ ಪಾರಾಯಣ ನಡೆಯಲಿದೆ. ಬಳಿಕ 579 ಕೃತಿಗಳ ಕಾರ್ಯಕ್ರಮ ಎಸ್.ವಿ. ಪಾಟೀಲ್ ಗುಂಡೂರು ಅವರ ಪ್ರಕಟಿತ ಪುಸ್ತಕಗಳ ಪ್ರದರ್ಶನ, ಯೋಗ ಥೆರಪಿ ಹಾಗೂ ಶ್ರೀಗುರು ದೊಡ್ಡಬಸವೇಶ್ವರ ಸ್ವಾಮಿಯ ಶತನಾಮಾವಳಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ. ಮಹಿಳಾ ಸಬಲೀಕರಣ ಕುರಿತು ಡಾ. ರಾಜಶ್ರೀ ಪಾಟೀಲ್ ಉಪನ್ಯಾಸ ನೀಡಲಿದ್ದು, ಮಹಾದೇವಯ್ಯ ಸ್ವಾಮಿಗಳ ಪ್ರವಚನ ಹಾಗೂ ಶರಣಯ್ಯ ಗವಾಯಿಗಳಿಂದ ಭಕ್ತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದರು.
ಜೂ.12ರಂದು ವಚನಾನುಸಂಧಾನ ಗ್ರಂಥ ಲೋಕಾರ್ಪಣೆ ಸಮಾರಂಭ ನಡೆಯಲಿದ್ದು, ಸಂಡೂರು ವಿರಕ್ತಮಠದ ಪ್ರಭುಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಸಂಶೋಧಕ ಡಾ. ಸಿ.ಶಿವಕುಮಾರ ಸ್ವಾಮಿ ಗ್ರಂಥ ಲೋಕಾರ್ಪಣೆ ಮಾಡಲಿದ್ದು, ಅಮಾತಿ ಬಸವರಾಜ್ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.
ಜೂ.13ರಂದು ಪ್ರಶಸ್ತಿ ಪ್ರದಾನ : ನಾನಾ ಕ್ಷೇತ್ರಗಳ ಸಾಧಕರಾದ ಲಿಂ. ಡಾ.ನಾಗರಾಜ ಕೊಂಡ್ಲಹಳ್ಳಿ, ವೈದ್ಯ ಚಂದ್ರಮೌಳಿ ಗಡಿಗಿ, ಕೂಡ್ಲಿಗಿಯ ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ್, ಹಿಂದೂಸ್ಥಾನಿ ಗಾಯಕಿ ದೊಡ್ಡಬಸವ ಗವಾಯಿ, ಸಮಾಜ ಸೇವಕ ಮಹಾನಂದಿ ಬಸವಲಿಂಗಪ್ಪ ಅವರಿಗೆ ಗುರು ಚರಂತಾರ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ,ಶಾಸಕ ನಾರಾ ಭರತ್‌ರೆಡ್ಡಿ, ಮೇಯರ್ ಪಿ. ಗಾದೆಪ್ಪ, ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಪ್ರಮುಖರಾದ ಪಂಚಾಕ್ಷರಪ್ಪ, ಶಿವಾನಂದ, ಸಿದ್ದರಾಮ ಕಲ್ಮಠ, ಜೋಳದರಾಶಿ ತಿಮ್ಮಪ್ಪ, ಬಸವರಾಜ್ ಇತರರಿದ್ದರು.