ಸಂಡೂರಿನ ಶ್ರೀಶೈಲೇಶ್ವರ ವಿದ್ಯಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರೃ ಹೋರಾಟಗಾರ ಮದನ್ ಲಾಲ್ ಧಿಂಗ್ರಾ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ವಿದ್ಯಾ ಕೇಂದ್ರದ ಆಡಳಿತಾಧಿಕಾರಿ ಕುಮಾರ ಎಸ್.ನಾನಾವಟೆ ಮಾತನಾಡಿದರು. 
ಬಳ್ಳಾರಿ

ಬ್ರಿಟಿಷ್ ನೆಲದಲ್ಲಿ ಗಲ್ಲಿಗೇರಿದ ಪ್ರಥಮ ಭಾರತೀಯ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಆಡಳಿತಾಧಿಕಾರಿ ಕುಮಾರ ಎಸ್. ನಾನಾವಟೆ ಹೇಳಿಕೆ
  • ಸ್ವಾತಂತ್ರೃ ಹೋರಾಟಗಾರ ಮದನ್ ಲಾಲ್ ಧಿಂಗ್ರಾ ಸ್ಮರಣೆ

ಸಂಡೂರು:

ದೇಶ ಕಂಡ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ಮದನ್ ಲಾಲ್ ಧಿಂಗ್ರಾ ಬ್ರಿಟಿಷರ ನೆಲವಾದ ಇಂಗ್ಲೆಂಡಿನಲ್ಲಿ ಮರಣ ದಂಡನೆಗೆ ಗುರಿಯಾದ ಪ್ರಥಮ ಭಾರತೀಯ ಎಂದು ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ಆಡಳಿತಾಧಿಕಾರಿ ಕುಮಾರ ಎಸ್. ನಾನಾವಟೆ ಹೇಳಿದರು.

ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ಲಕ್ಷ್ಮೀ ಎಸ್. ನಾನಾವಟೆ ಶಿಕ್ಷಣ ಮಹಾವಿದ್ಯಾಲಯ, ಭಾರತೀಯ ಸುರಾಜ್ಯ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರೃ ಹೋರಾಟಗಾರ ಮದನ್ ಲಾಲ್ ಧಿಂಗ್ರಾ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಧಿಂಗ್ರಾ ಮನಸ್ಸು ಮಾಡಿದ್ದರೆ ಶ್ರೀಮಂತಿಕೆ ಸುಪ್ಪತ್ತಿಗೆಯಲ್ಲಿ ಜೀವಿಸಬಹುದಾಗಿತ್ತು. ಆದರೆ ಅಂದಿನ ದಿನಮಾನಗಳಲ್ಲಿ ರಾಜರ ಬಳಿ ಇಲ್ಲದಿದ್ದಂತಹ ಕಾರು, ಬಂಗಂಲೆ ಮತ್ತಿತರ ವೈಭೋಗದ ವಸ್ತುಗಳು ಇವರ ಬಳಿ ಇದ್ದವು. ಬ್ರಿಟಿಷ್ ಸರ್ಕಾರ ಇವರ ಕುಟುಂಬವನ್ನು ರಾಜಸಾಹೇಬ ಎಂದೇ ಗೌರವಿಸುತ್ತಿತ್ತು. ಲಾಲಾ ಲಜಪತ್ ರಾಯ್ ಮತ್ತು ಭಗತ್‌ಸಿಂಗ್‌ರ ಚಿಕ್ಕಪ್ಪ ಅಜಿತ್ ಸಿಂಗ್ ಸಂಘಟಿಸಿದ್ದ ಪಗ್ಡಿ ಸಂಬಾಲ್ ಜತ್ತ ಎಂಬ ಚಳವಳಿಯಲ್ಲಿ ಪಾಲ್ಗೊಂಡರು. ಸ್ವದೇಶಿ ಚಳವಳಿಗೆ ಬದ್ಧನಾಗಿ ಲಾಹೋರಿನ ಕಾಲೇಜು ದಿನಗಳಲ್ಲಿ ಬ್ರಿಟಿಷ್ ಸರ್ಕಾರ ವಿದೇಶಿ ಬಟ್ಟೆಯಲ್ಲಿ ತಯಾರಿಸಿದ ಕೋಟು ಧರಿಸಬೇಕೆಂದು ವಿಧಿಸಿದ್ದ ಶಿಸ್ತನ್ನು ವಿರೋಧಿಸಿ ಕಾಲೇಜಿನಿಂದಲೂ ಹೊರಹಾಕಲ್ಪಟ್ಟರು.
ಬ್ರಿಟಿಷರು ಕಾಲ್ಕಾ ಎಂಬಲ್ಲಿ ನಡೆಸುತ್ತಿದ್ದ ಟಾಂಗಾ ಸೇವಾ ಸಂಸ್ಥೆಯಲ್ಲಿ ಗುಮಾಸ್ತರಾದರು. ಅಲ್ಲಿಯೂ ಕಾರ್ಮಿಕರ ಸಂಘಟನೆ ಮಾಡಲು ಹೋಗಿ ಕೆಲಸ ಕಳೆದುಕೊಂಡರು. ತನ್ನ ಹಿರಿಯ ಸಹೋದರ ಡಾ.ಬಿಹಾರಿಲಾಲ್ ಮಾತಿಗೆ ಗೌರವ ಕೊಟ್ಟು ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೊರಟರು.
ಅಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ತೊಡಗಿದರೂ ಸ್ವಾತಂತ್ರ್ಯ ಚಳವಳಿಗೆ ಇಳಿದುಬಿಟ್ಟರು. ಶ್ಯಾಮ್ಜಿವರ್ಮ, ವೀರ ಸಾವರ್ಕರ್ ಅವರ ಪ್ರಭಾವ ಧಿಂಗ್ರಾರನ್ನು ಸೆಳೆದುಬಿಟ್ಟಿತು. ಜತೆ ಜತೆಯಾಗಿಯೇ ಸ್ವಾತಂತ್ರ್ಯ ಕಾರ್ಯಗಳಲ್ಲಿ ತೊಡಗಿದ್ದರು. ಆದರೆ ಬ್ರಿಟಿಷ್ ಸರ್ಕಾರದ ಕಿರುಕಳ ತಾಳದೆ ಶ್ಯಾಮ್ಜಿವರ್ಮ ಪ್ಯಾರಿಸ್‌ಗೆ ವಲಸೆ ಹೋಗಬೇಕಾಯಿತು. ಇತ್ತ ವೀರಸಾವರ್ಕರ್‌ರಿಂದ ಪ್ರೋತ್ಸಾಹಿತರಾದ ಧಿಂಗ್ರಾ, ಇಂಗ್ಲೆಂಡಿನಲ್ಲಿ ಭಾರತೀಯರನ್ನು ಗುಪ್ತಚರರಾಗಿ ಬಳಸುವುದರಲ್ಲಿ ನಿಷ್ಠಾವಂತನಾಗಿದ್ದರು. ಸರ್.ವಿಲಿಯಮ್ ಹಟ್ಸ್ ಕರ್ಜನ್ ವೈಲಿ ಎಂಬ ಅಧಿಕಾರಿಯನ್ನು ಗುಂಡಿಕ್ಕಿ ಕೊಂದರು. ಒಂದೂವರೆ ತಿಂಗಳುಗಳ ಕಾಲ ವಿಚಾರಣೆ ನಡೆದು 1909ರ ಆ.17ರಂದು 26ರ ಹರೆಯದ ಧಿಂಗ್ರಾ ಅವರನ್ನು ಗಲ್ಲಿಗೇರಿಸಲಾಯಿತು ಎಂದು ವಿವರಿಸಿದರು.
ಪ್ರಾಚಾರ್ಯ ಯು.ದೇವರಾಜ್, ಸಿಬ್ಬಂದಿ, ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.