ಬಳ್ಳಾರಿಯ ಎಸ್ಪಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಾನವ ಕಳ್ಳ ಸಾಗಣೆಕೆ ದಿನ ಆಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶ ಸಿದ್ದಲಿಂಗ ಪ್ರಭು ಉದ್ಘಾಟಿಸಿದರು. ಎಸ್ಪಿ ಸುಮನ್ ಡಿ.ಪನ್ನೇಕರ್, ನ್ಯಾ. ರಾಜೇಶ್ ಎನ್.ಹೊಸಮನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ ಇತರರಿದ್ದರು. ==
- ವಿಶ್ವ ಮಾನವ ಕಳ್ಳಸಾಗಣೆ ತಡೆ ದಿನ
ಬಳ್ಳಾರಿ : ಅಮಾಯಕ ಮಕ್ಕಳು ಮತ್ತು ದುರ್ಬಲರನ್ನು ಬಲಿಪಶು ಮಾಡುವ ಮಾನವ ಕಳ್ಳಸಾಗಾಣಿಕೆ ಜಾಲ ಭೇದಿಸಲು ಸಾಂಪ್ರದಾಯಿಕ ತನಿಖೆ ಸಾಲದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಹೇಳಿದರು.
ನಗರದ ಎಸ್ಪಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಮಾನವ ಕಳ್ಳಸಾಗಣೆ ತಡೆ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತನಿಖೆಯಲ್ಲಿ ತಂತ್ರಜ್ಞಾನ ಆಧಾರಿತ ಸಾಕ್ಷೃಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಸ್ಥಳ ಮಹಜರು ಮತ್ತು ವಿಚಾರಣೆಯ ಸಂಪೂರ್ಣ ವಿಡಿಯೋಗ್ರಾಫಿ ಕಡ್ಡಾಯವಾಗಬೇಕು. ಪ್ರಕರಣ ದಾಖಲಾದ ತಕ್ಷಣವೇ ಆನ್‌ಲೈನ್ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸುವ ವ್ಯವಸ್ಥೆ ಜಾರಿಯಾದಾಗ ಸಾಕ್ಷೃ ನಾಶ ತಡೆಯಲು ಸಾಧ್ಯ. ಕೇವಲ ಮಕ್ಕಳನ್ನು ಬಂಧಿಸುವುದಕ್ಕಿಂತ ಅವರ ಹಿಂದಿರುವ ನಿಜವಾದ ಸೂತ್ರಧಾರರನ್ನು ಪತ್ತೆಹಚ್ಚುವುದು ತನಿಖೆಯ ಮುಖ್ಯ ಗುರಿಯಾಗಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಎಸ್ಪಿ ಡಾ. ಸುಮನ್ ಡಿ. ಪೆನ್ನೇಕರ್ ಮಾತನಾಡಿ, ಮಾನವ ಕಳ್ಳಸಾಗಾಣಿಕೆ ತಡೆಗೆ ವಿವಿಧ ಇಲಾಖೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಪ್ರಕರಣಗಳ ಪರಿಣಾಮಕಾರಿ ತನಿಖೆ, ಕಾನೂನುಗಳ ಸರಿಯಾದ ಅನುಷ್ಠಾನ ಮತ್ತು ನಿಖರ ಸಾಕ್ಷಾೃಧಾರ ಸಂಗ್ರಹಣೆಯ ಮೂಲಕ ನ್ಯಾಯಾಲಯದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಹೆಚ್ಚಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಅವರು, ಮಾನವ ಕಳ್ಳಸಾಗಣಿಕೆ ತಡೆ ಕುರಿತು ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಿದರು.