ಕಂಪ್ಲಿ ಉತ್ಸವ ಹಿನ್ನೆಲೆಯಲ್ಲಿ ತುಂಗಭದ್ರಾ ಆರತಿ ನಡೆಯುವ ಸೋಮಪ್ಪ ಕೆರೆಯಲ್ಲಿ ಜಲ ಸಸ್ಯ ತೆರವುಗೊಳಿಸುತ್ತಿರುವುದು.
ಕಂಪ್ಲಿ: ಕಂಪ್ಲಿ ಉತ್ಸವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿರುವ ಐತಿಹಾಸಿಕ ಸೋಮಪ್ಪ ಕೆರೆಯಲ್ಲಿ ತುಂಗಭದ್ರಾ ಆರತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆರೆಯಲ್ಲಿನ ಜಲಸಸ್ಯ ತೆರವುಗೊಳಿಸುವ ಕಾರ್ಯ ಸೋಮವಾರ ನಡೆಯಿತು.
ಎರಡು ಜೆಸಿಬಿಗಳು, 25 ತೆಪ್ಪಗಳು, ಎಂಟು ಟ್ರ್ಯಾಕ್ಟರ್‌ಗಳೊಂದಿಗೆ 40 ಜನ ಕಾರ್ಮಿಕರು ಜಲಸಸ್ಯ(ಹೈಕಾರ್ನಿಯಾ)ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು. ಉತ್ಸವಕ್ಕಾಗಿ ಐತಿಹಾಸಿಕ ದೇವಸ್ಥಾನ, ವೇದಿಕೆ ಹಾಗೂ ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ 80 ಜನ ಪೌರ ಕಾರ್ಮಿಕರು ನಿರತರಾಗಿದ್ದಾರೆ. ಸೋಮಪ್ಪ ಕೆರೆ ಪರಿಸರ ಸ್ವಚ್ಛತೆಗೆ 25 ಜನ, ವೇದಿಕೆ ಬಳಿ 30ಜನ, ಕೋಟೆ ಪಂಪಾಪತಿ ದೇವಸ್ಥಾನ ಬಳಿ 10, ಸೋಮಪ್ಪ ಗುಡಿ ಬಳಿ 5, ಮುಖ್ಯರಸ್ತೆಗಳ ಸ್ವಚ್ಛತೆಗೆ 10ಜನ ತೊಡಗಿಕೊಂಡಿದ್ದಾರೆ. ವೇದಿಕೆ ಮತ್ತು ಸೋಮಪ್ಪ ಕೆರೆಯ ಸ್ವಚ್ಛತೆ, ತುಂಗಾರತಿ ಸಿದ್ಧತೆಗಳನ್ನು ಶಾಸಕ ಜೆ.ಎನ್.ಗಣೇಶ್ ಸೋಮವಾರ ಪರಿಶೀಲಿಸಿದರು.
ಉತ್ಸವ ನಿಮಿತ್ತ ಫೆ.11ರಂದು ಬೆಳಗ್ಗೆ 9ರಿಂದ ಬೆಳಗ್ಗೆ 11ಗಂಟೆತನಕ ರಂಗೋಲಿ, ಮೆಹಂದಿ ಸ್ಪರ್ಧೆ ಆಯೋಜಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಿಂದ ಕೆಎಸ್ ಭವನ ರಸ್ತೆವರೆಗೆ ರಂಗೋಲಿ ಸ್ಪರ್ಧೆ ನಡೆಯಲಿದೆ.