ಬಳ್ಳಾರಿಯ ಗಡಗಿ ಚನ್ನಪ್ಪ ವೃತ್ತದಲ್ಲಿ ಪುಟಪಾತ್ ರಸ್ತೆ ಮೇಲೆ ಅಕ್ರಮವಾಗಿ ನಿರ್ಮಿಸಲಾಗಿದ್ದ ನಾಮಫಲಕವನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. === 
ಬಳ್ಳಾರಿ

ಪಾಲಿಕೆಯಿಂದ ತೆರವು ಕಾರ್ಯಾಚರಣೆ

ಪ್ರಮುಖ ಮುಖ್ಯಾಂಶಗಳು

  • ಪಾಲಿಕೆ
ಬಳ್ಳಾರಿ : ನಗರದ ನಾನಾ ವೃತ್ತಗಳ ಪಾದಾಚಾರಿ (ಫುಟ್‌ಪಾತ್) ರಸ್ತೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್‌ಗಳನ್ನು ಪಾಲಿಕೆಯಿಂದ ಬುಧವಾರ ತೆರವುಗೊಳಿಸಲಾಯಿತು.
ಇಲ್ಲಿನ ಗಡಗಿ ಚನ್ನಪ್ಪ ವೃತ್ತದಿಂದ ಎಪಿಎಂಸಿ, ಸಂಗಮ್ ವೃತ್ತದಿಂದ ತಾರಾನಾಥ್ ಆಸ್ಪತ್ರೆ ಹಾಗೂ ದುರ್ಗಮ್ಮ ದೇವಸ್ಥಾನದಿಂದ ತಾಳೂರು ರಸ್ತೆಯ ಪುಟಪಾತ್ ರಸ್ತೆಗಳಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ಪಾಲಿಕೆಯ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯ ನಿರ್ವಹಿಸಿದರು. ಕಾರ್ಯಾಚರಣೆಯ ವೇಳೆ ನಗರದ ನಾನಾ ಪುಟಪಾತ್‌ಗಳಲ್ಲಿ ಅಕ್ರಮವಾಗಿ ತಾತ್ಕಲಿಕವಾಗಿ ನಿರ್ಮಿಸಿದ್ದ 65ಕ್ಕೂ ಹೆಚ್ಚು ಶೆಡ್, ನಾಮಫಲಕ ಹಾಗೂ ಬೀದಿಬದಿ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮುನಾಫ್ ಪಟೇಲ್ ಮಾತನಾಡಿ, ನಗರದ ಪಾದಚಾರಿ ರಸ್ತೆಗಳನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈಗಾಗಲೇ 65ಕ್ಕೂ ಹೆಚ್ಚು ತಾತ್ಕಲಿಕ ಶೆಡ್‌ಗಳನ್ನು ಗುರುತಿಸಿ ತೆರವುಗೊಳಿಸಲಾಗಿದೆ. ಫುಟ್‌ಪಾತ್‌ಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವವರಿಗೆ ಮುನ್ನೆಚ್ಚರಿಕೆ ನೀಡಲಾಗಿದ್ದು, ಸ್ವಯಂ ಪ್ರೇರಿತವಾಗಿ ತೆರವುಗೊಳಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಗರದಲ್ಲಿ ಪಾದಚಾರಿಗಳಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಒದಗಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಾಚರಣೆ ನಡೆಸಲಾಗುವುದು ಎಂದರು.
===