ಹೂವಿನಹಡಗಲಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಶಾಸ್ತ್ರಿ ವೃತ್ತದವರೆಗೆ ಪುರಸಭೆ ಅಧಿಕಾರಿಗಳು ಪುಟ್‌ಪಾತ್ ತೆರವು ಕಾರ್ಯಾಚರಣೆ ನಡೆಸಿದರು. ಪುರಸಭೆ ಮುಖ್ಯಾಧಿಕಾರಿ ಇಮಾಮ್ ಸಾಹೇಬ್ ಪಿಎಸ್‌ಐ ಜೆ.ಕೆ. ಅಬ್ಬಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪುಟ್‌ಪಾತ್ ಅತಿಕ್ರಮಣ ತೆರವು
ಹೂವಿನಹಡಗಲಿ: ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಶಾಸ್ತ್ರಿ ವೃತ್ತದವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ಅತಿಕ್ರಮಣಗೊಂಡಿದ್ದ ಪುಟ್‌ಪಾತ್‌ಗಳನ್ನು ಶನಿವಾರ ಪುರಸಭೆ ಅಧಿಕಾರಿಗಳು ತೆರವುಗೊಳಿಸಿದರು.
ಮಧ್ಯಾಹ್ನ ಆರಂಭವಾದ ಕಾರ್ಯಾಚರಣೆ ಸಂಜೆ ವೇಳೆಗೆ ಪೂರ್ಣಗೊಂಡಿತು. ಈ ವೇಳೆ ವ್ಯಾಪಾರಿಗಳು ಹಾಗೂ ಪುರಸಭೆ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಇದನ್ನು ಲೆಕ್ಕಿಸದೆ ಅಧಿಕಾರಿಗಳು ವ್ಯಾಪಾರಿಗಳ ವಸ್ತುಗಳನ್ನು ಪುರಸಭೆಯ ಟ್ರ್ಯಾಕ್ಟರ್‌ಗಳಲ್ಲಿ ತುಂಬಿಸಿ ಕಚೇರಿಗೆ ಸಾಗಿಸಿದರು.
ಪುಟ್‌ಪಾತ್ ಒತ್ತುವರಿಯಿಂದ ಸಂಚಾರ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿರುವುದನ್ನು ಡಿ.15ರಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ, ತಹಸೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಪುಟ್‌ಪಾತ್ ತೆರವುಗೊಳಿಸಲು ಸೂಚಿಸಿದ್ದರು.
ಅದರಂತೆ ಅಂದಿನ ತಹಸೀಲ್ದಾರ್ ಸಂತೋಷ್ ಕುಮಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿ ಇಮಾಮ್ ಸಾಹೇಬ್ ಬೀದಿಬದಿ ವ್ಯಾಪಾರಿಗಳ ಸಭೆ ಕರೆದು, ಪರ್ಯಾಯ ಸ್ಥಳ ಗುರುತಿಸಿ 10 ದಿನಗಳ ಗಡುವು ನೀಡಿದ್ದರು. ಆದರೆ ವ್ಯಾಪಾರಸ್ಥರು ಸ್ಥಳಾಂತರ ಮಾಡದ ಹಿನ್ನೆಲೆಯಲ್ಲಿ ಶನಿವಾರ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.
ಮುಂದಿನ ವಾರ ಶಾಸ್ತ್ರಿ ವೃತ್ತದಿಂದ ಕಲ್ಲೇಶ್ವರ ದೇವಸ್ಥಾನದವರೆಗೆ ಹಾಗೂ ನಂತರ ಶಾಸ್ತ್ರಿ ವೃತ್ತದಿಂದ ಬಸ್‌ನಿಲ್ದಾಣದವರೆಗೆ ರಸ್ತೆಯ ಎರಡೂ ಬದಿಗಳಲ್ಲಿನ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಯಲಿದೆ. ಬೀದಿಬದಿ ವ್ಯಾಪಾರಿಗಳಿಗೆ ಯಾವುದೇ ಆರ್ಥಿಕ ನಷ್ಟ ಮಾಡಿಲ್ಲ ಎಂದು ತಹಸೀಲ್ದಾರ್ ಹೇಳಿದರು. ಇಟ್ಟಿಗಿ ಪಿಎಸ್‌ಐ ಜೆ.ಕೆ. ಅಬ್ಬಾಸ್, ಪುರಸಭೆ ಸಿಬ್ಬಂದಿ ಮೈಲಾರಪ್ಪ, ಮಾರುತಿ, ರಾಮಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.