ರಸ್ತೆ ಒತ್ತುವರಿ ತೆರವಿಗೆ ಆಗ್ರಹಿಸಿ ಕುರುಗೋಡು ಪುರಸಭೆ ಅಧ್ಯಕ್ಷ ಟಿ.ಶೇಕಣ್ಣಗೆ 14 ನೇ ವಾರ್ಡಿನ ನಿವಾಸಿಗಳು ಮನವಿ ಸಲ್ಲಿಸಿದರು.  
ಬಳ್ಳಾರಿ

ರಸ್ತೆ ಒತ್ತುವರಿ ತೆರವುಗೊಳಿಸಿ

ಅಶೋಕ್ ಕುಮಾರ್ ಎನ್
ಕುರುಗೋಡು: ಪಟ್ಟಣದ 14ನೇ ವಾರ್ಡಿನಲ್ಲಿ ರಸ್ತೆ ಒತ್ತುವರಿ ತೆರವುಗೊಳಿಸುವ ಸಿ ಸಿ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿ ಪುರಸಭೆ ಅಧ್ಯಕ್ಷ ಟಿ.ಶೇಖಣ್ಣಗೆ ನಿವಾಸಿಗಳು ಮಂಗಳವಾರ ಮನವಿ ಸಲ್ಲಿಸಿದರು.
ಪುರಸಭೆ ಸದಸ್ಯ ನಾಗಭೂಷಣ ಮಾತನಾಡಿ, ಪಟ್ಟಣದ ಸ.ನಂ. 347/ಎ ರಲ್ಲಿ ನಿವಾಸಿಗಳು ಬಳ್ಳಾರಿ ಹಾಗೂ ಗೆಣಿಕೆಹಾಳ್ ಮುಖ್ಯರಸ್ತೆ ಸಂಪರ್ಕಿಸುವ ಮಾರ್ಗ ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಂಡಿದ್ದಾರೆ. ಇದರಿಂದ ರಸ್ತೆ ಕಿರಿದಾಗಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಮಳೆ ಬಂದಾಗ ರಸ್ತೆ ಕೆಸರುಗದ್ದೆಯಾಗಿ ಮಾರ್ಪಾಡಾಗುತ್ತದೆ ಎಂದು ದೂರಿದರು.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗೆ ಎರಡು ಬಾರಿ ಹಾಗೂ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಲೋಕೋಪಯೋಗಿ ಇಲಾಖೆಯಿಂದ ಸುಮಾರು 66 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಶಾಸಕ ಗಣೇಶ್ ಚಾಲನೆ ನೀಡಿದ್ದರು. ಪುರಸಭೆ ಸರ್ವ ಸದಸ್ಯರ ಸಭೆಯಲ್ಲಿ ರಸ್ತೆ ಒತ್ತುವರಿ ತೆರವಿಗೆ ತೀರ್ಮಾನಿಸಲಾಗಿತ್ತು. ಈವರೆಗೂ ಕೆಲಸ ಆರಂಭವಾಗಿಲ್ಲ ಎಂದು ಆಗ್ರಹಿಸಿದರು.
ಅಧ್ಯಕ್ಷ ಶೇಕಣ್ಣ ಮಾತನಾಡಿ, ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಪಡಿಸುವವರಿಗೆ ನೋಟಿಸ್ ನೀಡಲಾಗುವುದು. ಒಂದು ವಾರದೊಳಗೆ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ನಿವಾಸಿಗಳಾದ ಕುರುಬರ ಗಾದಿಲಿಂಗಪ್ಪ, ಓಬಳೇಶಪ್ಪ, ಕೊರಚರ ಗೋಪಾಲಪ್ಪ, ಅಗಸರ ಚನ್ನಬಸಪ್ಪ, ಸಾಕಮ್ಮ, ಗೋವಿಂದಮ್ಮ, ಮೀನಾಕ್ಷಮ್ಮ ಇತರರಿದ್ದರು.