ನಂ.10 ಮುದ್ದಾಪುರದ ಆಂಜನೇಯಗುಡಿ ಆವರಣದಲ್ಲಿರುವ ತೆಂಗಿನಮರ ಒಣಗಿರುವುದು.
- ಸ್ಥಳೀಯರ ಒತ್ತಾಯ
- ಆಂಜನೇಯ ಹಾಗೂ ದ್ಯಾವಮ್ಮನ ದೇವಸ್ಥಾನ
ಕಂಪ್ಲಿ: ನಂ.10 ಮುದ್ದಾಪುರ ಗ್ರಾಮದ 3ನೇ ವಾರ್ಡ್ ಅವಲಕ್ಕಿ ಓಣಿ ಆಂಜನೇಯ ಹಾಗೂ ದ್ಯಾವಮ್ಮನ ದೇವಸ್ಥಾನ ಬಳಿ ಒಣಗಿರುವ ಮರಗಳನ್ನು ತೆರವುಗೊಳಿಸಲು ಗ್ರಾಮಾಡಳಿತ ಮುಂದಾಗಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಆಂಜನೇಯ ದೇವಸ್ಥಾನದ ಆವರಣದಲ್ಲಿ ತೆಂಗಿನಮರ, ದ್ಯಾವಮ್ಮನ ಗುಡಿ ಬಳಿ ತೆಂಗು, ಬೇವಿನ ಮರಗಳು ಒಣಗಿವೆ. ಆಷಾಢದ ಗಾಳಿ ವಿಪರೀತವಾಗಿದ್ದು, ಮರಗಳು ತೂಗಾಡುತ್ತಿವೆ. ಮರದ ಕೊಂಬೆಗಳು ಅಥವಾ ಬುಡ ಸಮೇತ ಉರುಳಿದರೆ ಮನೆ ಹಾಗೂ ನಿವಾಸಿಗಳಿಗೆ ತೊಂದರೆಯಾಗಲಿದೆ. ಕಳೆದ 3 ವರ್ಷಗಳಿಂದ ಮರಗಳನ್ನು ತೆರವುಗೊಳಿಸುವಂತೆ ಗ್ರಾಮಾಡಳಿತ ಗಮನಕ್ಕೆ ತರಲಾಗಿದ್ದು, ಕೂಡಲೇ ಕ್ರಮ ವಹಿಸಬೇಕು ಎಂದು ನಿವಾಸಿಗಳಾದ ಅವಲಕ್ಕಿ ರಾಘವೇಂದ್ರ, ಗೋಪಾಲಪ್ಪ, ಸಿದ್ದಪ್ಪ, ಬುಡ್ಡಾವಲಿ ಇತರರು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪಿಡಿಒ ಶಿಲ್ಪಾರಾಣಿ, ಒಣಗಿರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.