ಎರಡು ಗುಂಪುಗಳ ನಡುವೆ ಘರ್ಷಣೆ 
ಬಳ್ಳಾರಿ

ಎರಡು ಗುಂಪುಗಳ ನಡುವೆ ಘರ್ಷಣೆ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಸ್ಥಾನಕ್ಕೆ ಹಲ್ಲೆ
  • ವಿಕೋಪಕ್ಕೆ ತಿರುಗಿ ಹೊಡೆದಾಟ
ಬಳ್ಳಾರಿ : ಇಲ್ಲಿನ ಬೆಂಗಳೂರು ರಸ್ತೆಯಲ್ಲಿರುವ ಲಾರಿ ಅಸೋಸಿಯೇಷನ್ ಅಧ್ಯಕ್ಷ ಸ್ಥಾನವನ್ನು ಕೇಂದ್ರವಾಗಿಟ್ಟುಕೊಂಡು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ಮಹಾನಗರ ಪಾಲಿಕೆ ಸದಸ್ಯ ಮಿಂಚು ಶ್ರೀನಿವಾಸ್ ಅವರು ಈ ಹಿಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ತಮ್ಮ ಬೆಂಬಲಿಗ ಮಹೇಶ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಈ ಆಯ್ಕೆಯನ್ನು ಮತ್ತೊಂದು ಬಣ ವಿರೋಧಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಎರಡೂ ಗುಂಪುಗಳ ನಡುವೆ ಕೆಲ ದಿನಗಳಿಂದ ಭಿನ್ನಾಭಿಪ್ರಾಯ ಮುಂದುವರಿದಿತ್ತು.
ಜೂ.7ರಂದು ಲಾರಿ ಟರ್ಮಿನಲ್‌ಗೆ ಆಗಮಿಸಿದ್ದ ಮತ್ತೊಂದು ಗುಂಪಿನ ಸದಸ್ಯರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಅದು ವಿಕೋಪಕ್ಕೆ ತಿರುಗಿ ಹೊಡೆದಾಟಕ್ಕೆ ಕಾರಣವಾಯಿತು ಎನ್ನಲಾಗಿದೆ. ಪರಸ್ಪರ ಕೈಕೈ ಮಿಲಾಯಿಸಿಕೊಂಡ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಎಪಿಎಂಸಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಈ ಘಟನೆಯಲ್ಲಿ ಎರಡೂ ಗುಂಪಿನ ಐದಾರು ಮಂದಿಗೆ ಗಾಯಗಳಾಗಿದ್ದು, ಟ್ರಾಮ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ಪ್ರಭಾವಿಗಳ ಕುಮ್ಮಕ್ಕಿನಿಂದಲೇ ಈ ಘರ್ಷಣೆ ನಡೆದಿದೆ ಎಂಬ ಆರೋಪಗಳು ವ್ಯಕ್ತವಾಗಿದೆ. ಆದರೆ ಘಟನೆ ಸಂಬಂಧ ಈವರೆಗೆ ಪ್ರಕರಣ ದಾಖಲಾಗಿಲ್ಲ ಎಂದು ಎಪಿಎಂಸಿ ಠಾಣಾ ಪಿಎಸ್‌ಐ ರಫೀಕ್ ತಿಳಿಸಿದರು.
==