ನಗರದ ಉದ್ಯಮಿಗೆ ವಂಚನೆ 
ಬಳ್ಳಾರಿ

ನಗರದ ಉದ್ಯಮಿಗೆ 2.96 ಕೋಟಿ ವಂಚನೆ

ಪ್ರಮುಖ ಮುಖ್ಯಾಂಶಗಳು

  • ಉದ್ಯಮಿ ವಂಚನೆಗೆ ಗುರಿ
ಬಳ್ಳಾರಿ : ಅಧಿಕ ಲಾಭಾಂಶದ ಆಮಿಷವೊಡ್ಡಿ ಷೇರು ಮಾರುಕಟ್ಟೆ ಹೂಡಿಕೆಯ ಹೆಸರಿನಲ್ಲಿ ನಗರದ ಮಾರ್ಕೆಟಿಂಗ್ ಉದ್ಯಮಿಯೊಬ್ಬರಿಗೆ 2.96 ಕೋಟಿ ವಂಚಿಸಲಾಗಿದೆ. ಇಲ್ಲಿನ ನೆಹರೂ ಕಾಲನಿಯ ಉದ್ಯಮಿ ವಂಚನೆಗೆ ಗುರಿಯಾದವರು. ಕಳೆದ ಏಪ್ರಿಲ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಟೆಲಿಗ್ರಾಂ ಮೂಲಕ ಲಿಂಕ್ ಕಳುಹಿಸಿ, ಅವರನ್ನು ಎಸ್‌ಎಸ್‌ಬಿಸಿ ಡಿಟಿಪಿ ವಿಐಪಿ ಎಂಬ ವಾಟ್ಸಾಪ್ ಗ್ರೂಪ್‌ಗೆ ಸೇರಿಸಿದ್ದರು. ಅಲ್ಲಿ ಪರಿಚಯವಾದ ಮೈರಾ ಶರ್ಮಾ ಮತ್ತು ಸುರೇಂದರ್ ರೋಷ ಎಂಬುವವರು ಪ್ರತಿ ತಿಂಗಳು ಶೇ.10 ರಿಂದ 20ರಷ್ಟು ಲಾಭ ನೀಡುವುದಾಗಿ ನಂಬಿಸಿದ್ದರು.
ಹೆಚ್ಚಿನ ಲಾಭದ ಆಸೆಗಾಗಿ ಉದ್ಯಮಿಯು ಆರೋಪಿಗಳು ಸೂಚಿಸಿದ ನಕಲಿ ಲಿಂಕ್ ಮೂಲಕ ಹೊಸ ಖಾತೆ ತೆರೆದಿದ್ದರು. ಏಪ್ರಿಲ್‌ನಿಂದ ಜೂನ್ 30ರ ನಡುವಿನ ಅವಧಿಯಲ್ಲಿ ಉದ್ಯಮಿ ತಮ್ಮ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ ಒಟ್ಟು 2.96 ಕೋಟಿ ರೂ. ಹಣವನ್ನು ವಂಚಕರ ವಿವಿಧ ಖಾತೆಗಳಿಗೆ ಆನ್‌ಲೈನ್ ಮೂಲಕ ವರ್ಗಾಯಿಸಿ ಮೋಸ ಹೋಗಿದ್ದಾರೆ. ಈ ಕುರಿತು ಐಟಿ ಕಾಯ್ದೆ ಹಾಗೂ ಬಿಎನ್‌ಎಸ್ ಅಡಿಯಲ್ಲಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
---