ಬಳ್ಳಾರಿಯ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಮೇಲ್ವಿಚಾರಣಾ ಸಭೆಯಲ್ಲಿ ಡಿಸಿ ನಾಗೇಂದ್ರ ಪ್ರಸಾದ್ ಕೆ., ಮಾತನಾಡಿದರು. ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್, ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ತ್ರಿವೇಣಿ ಪತ್ತಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರದೇವಿ, ಡಿಡಿಪಿಐ ಉಮಾದೇವಿ ಇದ್ದರು. 
ಬಳ್ಳಾರಿ

ಮಕ್ಕಳ ಸುರಕ್ಷತೆ ಮುಖ್ಯ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಸುರಕ್ಷತೆ
ಬಳ್ಳಾರಿ : ಎರಡು ತಿಂಗಳಳೊಗೆ ಜಿಲ್ಲೆಯ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆ-ಕಾಲೇಜುಗಳ ವಸತಿ ನಿಲಯಗಳು ಕಡ್ಡಾಯವಾಗಿ ಹೊಸ ನಿಯಮಾವಳಿಗಳಡಿ ನೋಂದಯಿಸಿಕೊಳ್ಳಬೇಕು ಎಂದು ಡಿಸಿ ನಾಗೇಂದ್ರ ಪ್ರಸಾದ್ ಕೆ. ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಇದರ ಜತೆ ಪ್ರತಿಯೊಂದು ವಸತಿ ನಿಲಯದಲ್ಲಿ ಸ್ವಚ್ಛತೆ ಜತೆ ಮಕ್ಕಳ ಸುರಕ್ಷತೆಗೆ ಅದ್ಯತೆ ವಹಿಸಬೇಕು. ಜಿಲ್ಲೆಯ ಎಲ್ಲ ವಸತಿ ನಿಲಯಗಳ ಸಂಬಂಧಪಟ್ಟ ಅಧಿಕಾರಿಗಳು ಕರ್ನಾಟಕ ಮಕ್ಕಳ ವಸತಿ ನಿಲಯಗಳ ನಿಯಂತ್ರಣ ನೂತನ ನಿಯಮದಡಿ ಡಿಸಿ ಕಚೇರಿಗೆ ಅರ್ಜಿ ಸಲ್ಲಿಸಿ ನೋಂದಯಿಸಿಕೊಳ್ಳಬೇಕು. ತಪ್ಪಿದಲ್ಲಿ ಅಂತಹ ಸಂಸ್ಥೆಗಳ ಪರವಾನಗಿ ರದ್ದುಪಡಿಸಲಾಗುವುದು ಎಂದರು.
ಎಸ್ಪಿ ಸುಮನ್ ಡಿ.ಪನ್ನೇಕರ್ ಮಾತನಾಡಿ, ಪ್ರತಿ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಸುರಕ್ಷತಾ, ಮೇಲ್ವಿಚಾರಣಾ ಮತ್ತು ರ‌್ಯಾಗಿಂಗ್ ತಡೆ ಸಮಿತಿಗಳನ್ನು ರಚಿಸಿ ಪ್ರತಿ ತಿಂಗಳು ಸಭೆ ನಡೆಸಬೇಕು. ಆಡಳಿತ ಮಂಡಳಿಗಳಲ್ಲಿ ಕನಿಷ್ಠ ಒಬ್ಬ ಮಹಿಳಾ ಸದಸ್ಯರಿರಬೇಕು. ಬಾಲಕಿಯರ ನಿಲಯಗಳಿಗೆ ಮಹಿಳಾ ವಾರ್ಡನ್ ಮತ್ತು ಬಾಲಕರ ನಿಲಯಗಳಿಗೆ ಪುರುಷ ವಾರ್ಡನ್ ನೇಮಿಸುವುದು ಕಡ್ಡಾಯ. ಮಕ್ಕಳು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗದಂತೆ ತಡೆಯಲು ಪ್ರತಿ ಹದಿನೈದು ದಿನಗಳಿಗೊಮ್ಮೆ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ತಪಾಸಣೆ ಮಾಡಬೇಕು ಎಂದು ಸೂಚಿಸಿದರು.
ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಮಾತನಾಡಿ, ವಸತಿ ನಿಲಯಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕಾರ್ಯನಿರ್ವಹಣೆಯನ್ನು ಖಾತ್ರಿಪಡಿಸಿಕೊಳ್ಳಬೇಕು. ದೂರು ಪೆಟ್ಟಿಗೆಗಳ ಅಳವಡಿಕೆ ಮತ್ತು ನಿಗದಿತ ಊಟದ ಮೆನು ಪಾಲನೆ, ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ತಜ್ಞರಿಂದ ನಿರಂತರ ತಪಾಸಣೆ ಕೈಗೊಳ್ಳಬೇಕು ಎಂದರು.