ಬಳ್ಳಾರಿಯ ಎಸ್.ಎನ್.ಪೇಟೆಯಲ್ಲಿ ಉತ್ತರಾರಾಧನೆ ಅಂಗವಾಗಿ ರಾಘವೇಂದ್ರ ಸ್ವಾಮೀಜಿಯ ರಥೋತ್ಸವ ನಡೆಯಿತು. ಮಠದ ಪ್ರಧಾನ ವ್ಯವಸ್ಥಾಪಕ ಪಂ.ಪ್ರಸನ್ನಾಚಾರ ಐ.ಜಿ., ಪ್ರಮುಖರಾದ ಗುರುರಾಜ ಆಚಾರ್ಯ, ನವೀನ್ ಆಚಾರ್, ಪ್ರವೀಣ್ ಆಚಾರ್ ಇತರರಿದ್ದರು. 
ಬಳ್ಳಾರಿ

ಭಕ್ತಿಯಿಂದ ಜರುಗಿದ ರಥೋತ್ಸವ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಮೂರನೇ ದಿನ ಉತ್ತರಾರಾಧಾನೆ
ಬಳ್ಳಾರಿ : ನಗರದ ಸತ್ಯನಾರಾಯಣಪೇಟೆಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸೋಮವಾರ ಉತ್ತರಾರಾಧನೆ ಅಂಗವಾಗಿ ರಥೋತ್ಸವ ನಡೆಯಿತು. ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವು ಮೂರು ದಿನಗಳ ಕಾಲ ಅತ್ಯಂತ ವೈಭವ ಹಾಗೂ ಭಕ್ತಿಭಾವದಿಂದ ಜರುಗಿದವು. ಮಠದ ಪ್ರಧಾನ ವ್ಯವಸ್ಥಾಪಕ ಪಂ.ಪ್ರಸನ್ನಾಚಾರ ಐ.ಜಿ., ಅವರ ನೇತೃತ್ವದಲ್ಲಿ ನೂತನ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿಸಲಾಯಿತು. ನಗರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಗುರುರಾಯರಿಗೆ ಭಕ್ತಿ ಸಮರ್ಪಿಸಿದರು.
ಸಾಮೂಹಿಕ ಭಜನೆ, ಡೊಳ್ಳು ಕುಣಿತ ಹಾಗೂ ವಿವಿಧ ಕಲಾ ತಂಡಗಳ ಪ್ರದರ್ಶನದೊಂದಿಗೆ ರಥವು ಮಠದಿಂದ ಶ್ರೀರಾಘವೇಂದ್ರ ವೃತ್ತ, ಕೂಲ್ ಕಾರ್ನರ್, ಪಾಂಡುರಂಗ ಆಸ್ಪತ್ರೆ, ನಾಗಮ್ಮ ಸರ್ಕಾರಿ ಶಾಲೆ, ಉತ್ತರಾಧಿಮಠದ ಮಾರ್ಗವಾಗಿ ಸಂಚರಿಸಿ ಮರಳಿ ಮಠಕ್ಕೆ ತಲುಪಿತು. ಶ್ರೀಆಂಜನೇಯ ಹಾಗೂ ಶ್ರೀರಾಮನ ವೇಷಧಾರಿಗಳು ರಥೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದರು.
ಉತ್ತರಾಧಿಮಠದ ಬಳಿ ನವೀನ್ ಆಚಾರ ಹಾಗೂ ಪ್ರವೀಣ್ ಆಚಾರ ಅವರು ರಥೋತ್ಸವಕ್ಕೆ ಮಂಗಳಾರತಿ ನೆರವೇರಿಸಿ ಭಕ್ತಿ ಸಮರ್ಪಿಸಿದರು. ಬಳಿಕ ಪ್ರಸನ್ನಾಚಾರ ಐ.ಜಿ., ಗುರುರಾಜ ಆಚಾರ್ಯ ಅವರು ಭಕ್ತರಿಗೆ ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಿಸಿದರು. ಉತ್ತರಾರಾಧನೆ ಅಂಗವಾಗಿ ಮಠದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ವೇದ ಪಾರಾಯಣ, ಅಷ್ಟೋತ್ತರ ಪಾರಾಯಣ, ಗುರುರಾಯರಿಗೆ ಪಂಚಾಮೃತಾಭಿಷೇಕ, ಕನಕ ಮಹಾಪೂಜೆ, ಅರ್ಚನೆ, ವಿಶೇಷ ಅಲಂಕಾರ, ಹಸ್ತೋದಕ ಹಾಗೂ ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿದವು. ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರು, ಗಣ್ಯರು, ವಿವಿಧ ಭಜನಾ ಮಂಡಳಿಗಳ ಸದಸ್ಯರು ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಆರಾಧನಾ ಮಹೋತ್ಸವದ ಹಿನ್ನೆಲೆ ದಿನವಿಡೀ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿತ್ತು.