ಬಳ್ಳಾರಿಯ ಖಾಸಗಿಯ ಪ್ಯೂಪಿಲ್ ಟ್ರೀ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜುಗೊಳ್ಳುತ್ತಿದೆ ಎಂಬುದಾಗಿ ಆರೋಪಿಸಿ ಎಬಿವಿಪಿ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಪದಾಧಿಕಾರಿಗಳಾದ ನಾಗರಾಜ ಬಟಗೇರಾ, ಅಭಿಷೇಕ ಹಿರೇಮಠ, ಪ್ರವೀಣ್, ವೀರೇಶ್ ಇತರರಿದ್ದರು. 
ಬಳ್ಳಾರಿ

ಗಾಂಜಾ ಸರಬರಾಜು ಆರೋಪ

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಟನೆ
ಬಳ್ಳಾರಿ : ಇಲ್ಲಿನ ತಾಳೂರು ರಸ್ತೆಯಲ್ಲಿರುವ ಖಾಸಗಿಯ ಪ್ಯೂಪಿಲ್ ಟ್ರೀ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜುಗೊಳ್ಳುತ್ತಿದೆ ಎಂಬುದಾಗಿ ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಘಟನೆಯಿಂದ ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಯಿತು.
ಸಂಘಟನಾ ಕಾರ್ಯದರ್ಶಿ ನಾಗರಾಜ ಬಟಗೇರಾ ಮಾತನಾಡಿ, ಕಳೆದ ಕೆಲ ತಿಂಗಳಿಂದ ಶಾಲಾ ಕಾಲೇಜಿಗೆ ಗಾಂಜಾ ಸರಬರಾಜುಗೊಳ್ಳುತ್ತಿರುವ ಬಗ್ಗೆ ಸ್ಥಳೀಯ ವಿದ್ಯಾರ್ಥಿಗಳು ಮಾಹಿತಿ ಹಂಚಿಕೊಳ್ಳುವ ಜತೆಗೆ ನಮ್ಮಲ್ಲಿ ಕೆಲ ವಿಡಿಯೋಗಳು ಲಭ್ಯವಿದೆ. ಅಲ್ಲದೆ, ಗಾಂಜಾ ಸೇವನೆ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಿದರೂ ಈವರೆಗೂ ಗಾಂಜಾ ಸೇವಿಸಿದ ವಿದ್ಯಾರ್ಥಿಗಳ ಹಾಗೂ ಸರಬರಾಜು ಮಾಡುತ್ತಿರುವರ ಮೇಲೆ ಯಾವುದೇ ಕ್ರಮವಹಿಸಿಲ್ಲ. ಬೃಹತ್ ಪ್ರತಿಭಟಿಸಿ, ಗೋ ಮೂತ್ರವನ್ನು ಕಾಲೇಜು ಆವರಣದಲ್ಲಿ ಚಿಮ್ಮುವ ಮೂಲಕ ಸ್ವಚ್ಛಗೊಳಿಸುವ ಉದ್ದೇಶ ಹೊಂದಿತ್ತು. ಆದರೆ, ಆಡಳಿತ ಮಂಡಳಿ ಪ್ರತಿಭಟನೆಗೆ ಸಹಕಾರ ನೀಡಿಲ್ಲ. ಪೊಲೀಸರು ಹಾಗೂ ಕಾಲೇಜು ಸಿಬ್ಬಂದಿ ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಪ್ಯೂಪಿಲ್ ಟ್ರಿ ಕಾಲೇಜು ಚೇರಮನ್ ಪ್ರಭುದೇವ ಜಾಗಿರ್‌ದಾರ ಮಾತನಾಡಿ, ಕಾಲೇಜಿನಲ್ಲಿ ಗಾಂಜಾ ಸರಬರಾಜು ಎಂಬುದು ಸತ್ಯಕ್ಕೆ ದೂರವಾಗಿದೆ. ಸಂಘಟನೆಯ ಪದಾಧಿಕಾರಿಗಳು ಈವರೆಗೆ ಆಡಳಿತ ಮಂಡಳಿಗೆ ಯಾವುದೇ ಪೂರಕ ದಾಖಲೆ ಹಾಗೂ ಮಾಹಿತಿಯೂ ನೀಡಿಲ್ಲ. ಕೆಲವರ ಕುತಂತ್ರದಿಂದ ಕಾಲೇಜಿಗೆ ಕೆಟ್ಟ ಹೆಸರು ತರುವ ಉದ್ದೇಶ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದಾಗಿ ಕಿಡಿಕಾರಿದರು.
ಆರಂಭದಲ್ಲಿ ಕಾಲೇಜಿನ ಗೇಟ್ ಮುಂಭಾಗದಲ್ಲಿ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು, ಏಕಾಏಕಿ ಗೇಟ್ ತಳ್ಳಿ ಕಾಲೇಜು ಆವರಣದೊಳಗೆ ನುಗ್ಗಿದರು. ಕೊಠಡಿಯಲ್ಲಿನ ಕುರ್ಚಿ, ಪ್ರಾಚಾರ್ಯ ಕೊಠಡಿಯಲ್ಲಿ ಕಿಟಕಿ ಗ್ಲಾಸ್‌ಗಳು, ಸಸಿಗಳ ಮಣ್ಣಿನ ಕುಂಡಗಳನ್ನೆಲ್ಲ ಒಡೆದು ಹಾಕಿದರು. ಈ ವೇಳೆ ಪ್ರತಿರೋಧ ವ್ಯಕ್ಯಪಡಿಸಿದ ಕಾಲೇಜು ಸಿಬ್ಬಂದಿ ಮತ್ತು ಎಬಿವಿಪಿ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು. ಈ ನಡುವೆ ಗಲಾಟೆ ನಿಯಂತ್ರಿಸಲು ಯತ್ನಿಸಿದ ಪೊಲೀಸರ ಜತೆ ಕಾಲೇಜು ಸಿಬ್ಬಂದಿ, ಎಬಿವಿಪಿ ನಡುವೆ ಪರಸ್ಪರ ತಳ್ಳಾಟ ನಡೆಯಿತು. ಬಳಿಕ ಕಾಲೇಜು ಆವರಣದಲ್ಲಿ ಧರಣಿ ಕುಳಿತ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ಸ್ಥಳಕ್ಕೆ ಧಾವಿಸಿದ ಎಸ್ಪಿ ಡಾ.ಸುಮನ್ ಡಿ ಪನ್ನೇಕರ್ ಘಟನಾ ನಡೆದ ಸ್ಥಳ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಮಾಹಿತಿ ಪಡೆದರು.