ಟಪಾಲ್ ಗಣೇಶ್ 
ಬಳ್ಳಾರಿ

ಒಎಂಸಿ ವಿರುದ್ಧ ಕ್ರಮಕ್ಕೆ ಕೇಂದ್ರ ಆದೇಶ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಗಣಿ, ಭೂ ವಿಜ್ಞಾನ ಇಲಾಖೆಗೆ ಸೂಚನೆ
  • 68.5 ಹೆಕ್ಟೇರ್ ಅರಣ್ಯ ಒತ್ತುವರಿ ಪ್ರಕರಣ
ಬಳ್ಳಾರಿ : ನೆರೆಯ ಆಂಧ್ರದ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಒಡೆತನದ ಒಎಂಸಿ (ಒಬಳಾಪುರಂ ಮೈನಿಂಗ್ ಕಂಪನಿ)ಯು ರಾಜ್ಯದ ಗಡಿಯೊಳಗೆ 68.5 ಹೆಕ್ಟೇರ್ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದು ತಾಂತ್ರಿಕ ಸಮೀಕ್ಷೆಗಳಿಂದ ಬಹಿರಂಗಗೊಂಡಿದೆ. ಈ ಬಗ್ಗೆ ತಕ್ಷಣದ ಕ್ರಮವಹಿಸುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯವು ಕರ್ನಾಟಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೂಚಿಸಿದೆ.
ಆಂಧ್ರ ಸರ್ಕಾರ 2025ರ ಡಿಸೆಂಬರ್ ತಿಂಗಳಲ್ಲಿ ನಡೆಸಿದ ಸೂಪರ್ ಇಂಪೋಸ್ಡ್ ಸ್ಕೆಚ್‌ನಲ್ಲಿ ಜಿಲ್ಲೆಯ ಸಂಡೂರು ತಾಲೂಕಿನ ತುಮಿಟಿ, ವಿಠಲಾಪುರ ಗ್ರಾಮದ ವ್ಯಾಪ್ತಿಯೊಳಗೆ ಅಕ್ರಮವಾಗಿ ಗಣಿಗಾರಿಕೆ ನಡೆಸಿರುವುದು ಸ್ಪಷ್ಟವಾಗಿದೆ. ಜತೆಗೆ 1896 ರ ಬಳ್ಳಾರಿ ಮೀಸಲು ಅರಣ್ಯ ನಕ್ಷೆಯ ಪ್ರಕಾರ ಈ ಪ್ರದೇಶವು ಸಂರಕ್ಷಿತ ಅರಣ್ಯವಾಗಿದ್ದು, ಅಕ್ರಮವಾಗಿ ಗಣಿಗಾರಿಕೆ ನಡೆಸಿ ಅರಣ್ಯ ಕಾಯ್ದೆ ಉಲ್ಲಂಘಿಸಲಾಗಿದೆ ಎಂಬುದಾಗಿ ಆರೋಪಿಸಲಾಗಿದೆ.
ಒಎಂಸಿ ಹಾಗೂ (ಎಂಬಿಟಿ, ಹಿಂದ್ ಟ್ರೇಡರ್ಸ್, ಎನ್. ರತ್ನಯ್ಯ) ಅದರ ಗುಂಪು ಕಂಪನಿಗಳಿಂದ 884 ಕೋಟಿ ರೂ. ವಸೂಲಿ ಮಾಡಬೇಕು ಎಂಬುದಾಗಿ ಗಣಿ ಉದ್ಯಮಿ ಟಪಾಲ್ ಗಣೇಶ್ ರಾಜ್ಯ ಸರ್ಕಾರಕ್ಕೆ ಹಾಗೂ ಒಎಂಸಿ ಪ್ರಕರಣದಲ್ಲಿ ನ್ಯಾಯಮೂರ್ತಿ ಸುಧಾಂಶು ದುಲಿಯಾ ನೇತೃತ್ವದ ಸಮಿತಿಯ ವರದಿ ಲಗತ್ತಿಸಿ ಕ್ರಮವಹಿಸುವಂತೆ ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಆದರೆ, ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಒಎಂಸಿ ಗಣಿಗುತ್ತಿಗೆಯು ಆಂಧ್ರಪ್ರದೇಶ ರಾಜ್ಯದ ವ್ಯಾಪ್ತಿಗೆ ಬರುತ್ತಿದೆ. ಆಂಧ್ರ ಸರ್ಕಾರವೂ ಈ ಕುರಿತು ಕ್ರಮ ಕೈಗೊಳ್ಳಬೇಕಾಗಿರುತ್ತದೆ. ಗಡಿ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಿರುವ ಬಗ್ಗೆ ಸಂಪೂರ್ಣ ದಾಖಲೆಗಳನ್ನು ಗಣೇಶ್ ಸಲ್ಲಿಸಿರುವುದಿಲ್ಲ ಎಂಬುದಾಗಿ ಇಲಾಖೆಯ ನಿರ್ದೇಶಕ ರಂಗಪ್ಪ ಸರ್ಕಾರಕ್ಕೆ ಪತ್ರದಲ್ಲಿ ತಿಳಿಸಿದ್ದರು.
ಆದರೆ, ನಷ್ಟ ವಸೂಲಿಗೆ ಸಂಬಂಧಿಸಿದಂತೆ 2025ರ ಆಗಸ್ಟ್ 18ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದ ಗಣೇಶ್, ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯ 2025ರ ಮೇ6ರಂದು ಪ್ರಕಟಿಸಿದ್ದ ತೀರ್ಪಿನ ಪ್ರತಿ ಲಗತ್ತಿದ್ದರು. ಜತೆಗೆ ಒಎಂಸಿ ಆಂಧ್ರ ಪ್ರದೇಶದಲ್ಲಿ ಗಣಿಗಳನ್ನು ಹೊಂದಿದ್ದರೂ, ಕರ್ನಾಟಕ ಗಣಿಗಳಿಂದ ಅದಿರನ್ನು ಕದ್ದು ಸಾಗಿಸಿರುವುದಾಗಿಯೂ, ಅದಕ್ಕಾಗಿ ರಸ್ತೆಗಳನ್ನು ಮಾಡಿಕೊಂಡಿದ್ದಾಗಿಯೂ, ಹೀಗೆ ಅಕ್ರಮವಾಗಿ ಸಾಗಿಸಿದ ಅದಿರನ ಪ್ರಮಾಣ 28,49,613 ಟನ್‌ಗಳಾಗಿದ್ದು ಒಟ್ಟು ಮೌಲ್ಯ 884.13 ಕೋಟಿ ಎಂಬುದಾಗಿ ಕೋಟಿ ರೂ. ಎಂದು ಸಿಬಿಐ ತೀರ್ಪಿನಲ್ಲಿ ಉಲ್ಲೇಖಿಸಿತ್ತು.
ಜತೆಗೆ ಅಕ್ರಮ ಗಣಿಗಾರಿಕೆ ಕುರಿತು ಕೇಂದ್ರದ ಉನ್ನತಾಧಿಕಾರ ಸಮಿತಿ(ಸಿಇಸಿ) 2011ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವರದಿ, ಲೋಕಾಯುಕ್ತರ ವರದಿ ಸೇರಿದಂತೆ ಒಟ್ಟಾರೆ 1271 ಪುಟಗಳ ದಾಖಲೆಗಳನ್ನು ಟಪಾಲ್ ಗಣೇಶ್ ತಮ್ಮ ಪತ್ರಕ್ಕೆ ಪೂರಕವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೀಡಿದ್ದರು. ಇಷ್ಟಾದರೂ ಗಣೇಶ್ ತಮ್ಮ ದೂರಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆ ನೀಡಿಲ್ಲ ಎಂಬುದಾಗಿ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನುಣಿಚಿಕೊಂಡಿತ್ತು.
ಸರ್ಕಾರ ನಡೆ ಅನುಮಾನ : ರಾಜ್ಯದ ಗಡಿಯೊಳಗೆ ಅಕ್ರಮ ಗಣಿಗಾರಿಕೆಯಾಗಿದೆ ಎಂಬುದಾಗಿ ಸಮೀಕ್ಷೆ ನಡೆಸಿದ ಎಲ್ಲ ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೇ, ಆಂಧ್ರದ ಕಂಪನಿಯೊಂದು ರಾಜ್ಯದ ಅರಣ್ಯ ಕಾಯ್ದೆ ಉಲ್ಲಂಘನೆ ಹಾಗೂ ಕೋಟ್ಯಾಂತರ ರೂ. ಸರ್ಕಾರದ ಬೊಕ್ಕಸಕ್ಕೆ ನಷ್ಟ ಎಸಗಿದರೂ ಈವರೆಗೂ ಮಾತ್ರ ರಾಜ್ಯದ ಅಧಿಕಾರಿಗಳು ಮಾತ್ರ ಕ್ರಮವಹಿಸಿಲ್ಲ. ಸದ್ಯ ಕೇಂದ್ರವೂ ಈ ಒತ್ತುವರಿ ಹಾಗೂ ಗಡಿ ವಿವಾದದ ಕುರಿತು ರಾಜ್ಯ ಗಣಿ ಇಲಾಖೆಯ ನಿರ್ದೇಶಕರಿಗೆ ಕಟ್ಟುನಿಟ್ಟಿನ ಆದೇಶಿಸಿದೆ. ಯಾವ ವರದಿ ನೀಡುತ್ತಾರೆ ಎಂಬುದು ಕಾದು ನೋಡಬೇಕಿದೆ.
"

ಕೋಟ್.... ರಾಜ್ಯ ಸರ್ಕಾರದ ಇಲಾಖೆಯ ಅಧಿಕಾರಿಗಳಿಗೆ ನ್ಯಾಯಾಲಯದ ಆದೇಶದ ತೀರ್ಪಿನ ಪ್ರತಿ ಓದುವಷ್ಟು ಸಮಯವಿಲ್ಲ.- ಟಪಾಲ್ ಗಣೇಶ್, ಗಣಿ ಉದ್ಯಮಿ, ಬಳ್ಳಾರಿ.

===