ಬಳ್ಳಾರಿಯ ವಿದ್ಯಾನಗರದಲ್ಲಿ 81.93 ಲಕ್ಷ ರೂ. ವೆಚ್ಚದ ಲಿಂಕ್ ರಸ್ತೆ ಕಾಮಗಾರಿಗೆ ಶಾಸಕ ನಾರಾ ಭರತರೆಡ್ಡಿ ಭೂಮಿ ಪೂಜೆ ನೆರವೇರಿಸಿದರು. ಮಾಜಿ ಮೇಯರ್ ಎಂ.ರಾಜೇಶ್ವರಿ, ಮುಖಂಡರಾದ ಸುಬ್ಬರಾಯಡು, ವಿಷ್ಣು ಬೋಯಪಾಟಿ, ಮಲ್ಲಿ, ಯೋಗಾನಂದರೆಡ್ಡಿ, ಹೊನ್ನುರಪ್ಪ, ಹೊನ್ನಪ್ಪ, ಭತ್ರಿ ಮಂಜು ಇತರರಿದ್ದರು. 
ಬಳ್ಳಾರಿ

ಕೇಂದ್ರ ಆಡಳಿತಾತ್ಮಕ ವೈಪಲ್ಯ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ
  • ಪ್ರಧಾನಿ

ಬಳ್ಳಾರಿ : ಪ್ರಧಾನಿ ನರೇಂದ್ರ ಮೋದಿ ಸಂಕಷ್ಟದಲ್ಲಿ ಜನರನ್ನು ಕಾಪಾಡಬೇಕೇ ಹೊರತು, ತಮ್ಮ ಆಡಳಿತಾತ್ಮಕ ವೈಫಲ್ಯ ಜನರ ಮೇಲೆ ಹೇರಬಾರದು ಎಂದು ಶಾಸಕ ನಾರಾ ಭರತ್‌ರೆಡ್ಡಿ ಹೇಳಿದರು.

ನಗರದಲ್ಲಿ ನಾನಾ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಪಶ್ಚಿಮ ಬಂಗಾಳ ಹಾಗೂ ಪಂಚರಾಜ್ಯ ಚುನಾವಣೆಗಳ ಸಮಯದಲ್ಲಿ ಸುಮ್ಮನಿದ್ದ ಕೇಂದ್ರ ಸರ್ಕಾರ, ಚುನಾವಣೆ ಮುಗಿದ ಕೂಡಲೇ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿ ಬಡವರ ಹೊಟ್ಟೆಯ ಮೇಲೆ ಹೊಡೆದಿದೆ. ಚುನಾವಣಾ ಸಮಯದಲ್ಲಿ ಆಟವಾಡಿ, ನಂತರ ಬೆಲೆ ಏರಿಕೆ ಮಾಡುವುದು ಚಾಳಿಯಾಗಿದೆ ಎಂದರು.
ವಿಶ್ವದಲ್ಲಿ ಯುದ್ಧದ ಭೀತಿಯಿದೆ ಎಂಬ ಕಾರಣ ನೀಡಿ ಪೆಟ್ರೋಲ್, ಡೀಸೆಲ್ ಮಿತವಾಗಿ ಬಳಸಿ ಹಾಗೂ ಬಂಗಾರ ಖರೀದಿ ಮಾಡಬೇಡಿ ಎಂಬುದಾಗಿ ಹೇಳುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ದೇಶ. ಜನರು ತಮ್ಮ ಇಚ್ಛೆಯಂತೆ ಬದುಕುತ್ತಾರೆ. ವರ್ಕ್ ಫ್ರಮ್ ಹೋಮ್ ಮಾಡಿ ಎಂದು ಹೇಳಿದ ತಕ್ಷಣ ಕೇಳಲು ಜನ ಸಿದ್ಧರಿಲ್ಲ. ಕರೊನಾ ಸಮಯದಲ್ಲಿ ನಿರ್ಬಂಧ ಹೇರಿದಂತೆ ಈಗಲೂ ಜನ ಸಾಮಾನ್ಯರ ಮೇಲೆ ನಿರ್ಬಂಧ ಹೇರಲು ಹೊರಟಿದ್ದಾರೆ.
ದೇಶದಲ್ಲಿ ಯಾವುದೇ ವಸ್ತುಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಅದನ್ನು ಬಿಟ್ಟು ಜನರ ಮೇಲೆ ತಪ್ಪು ಹೊರಿಸುವುದು ಸರಿಯಲ್ಲ. ಮೋದಿಯವರು ರಾಜತಾಂತ್ರಿಕತೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅದಕ್ಕಾಗಿಯೇ 2024ರ ಚುನಾವಣೆಯಲ್ಲಿ ಜನ ಅವರಿಗೆ ಪೂರ್ಣ ಬಹುಮತ ನೀಡಲಿಲ್ಲ. ಪ್ರಸ್ತುತ ಟಿಡಿಪಿ ಮತ್ತು ಜೆಡಿಯು ಬೆಂಬಲದೊಂದಿಗೆ ಅಧಿಕಾರ ನಡೆಸುತ್ತಿದ್ದಾರೆ. ಇವರ ಇಂತಹ ಜನವಿರೋಧಿ ನೀತಿಗಳಿಗೆ 2029ರ ಚುನಾವಣೆಯಲ್ಲಿ ದೇಶದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಜಿಲ್ಲೆಯ ಜಿಂದಾಲ್‌ನಿಂದ ಆಯಾ ಗ್ರಾಂ ಪಂಚಾಯಿತಿಗೆ ಸಂಬಂಧ 20 ಕೋಟಿ ರೂ. ತೆರಿಗೆ ಪಾವತಿ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಜಿಲ್ಲಾಡಳಿತ ಬಡವರ ಮೇಲೆ ಸಣ್ಣ ಸಣ್ಣ ವಿಚಾರಕ್ಕೆ ದಂಡಯಾತ್ರೆ ಮಾಡುತ್ತಿದೆ. ಇಷ್ಟು ಮೊತ್ತದ ಹಣ ಪಾವತಿ ಮಾಡದಕ್ಕೆ ಕಂಪನಿ ಜತೆ ಅಧಿಕಾರಿಗಳು ಶಾಮೀಲುಯಾಗಿದ್ದಾರೆ ಎಂದು ಆರೋಪಿಸಿದರು.
ಇಲ್ಲಿನ ಹರಿಪ್ರಿಯ ನಗರದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಚರಂಡಿ, ಒಳ ಚರಂಡಿ ನಿರ್ಮಾಣ ಹಾಗೂ ವಿದ್ಯಾನಗರ 81.93ಲಕ್ಷ ರೂ. , ಸಿದ್ಧಾರ್ಥ ನಗರ, ಬ್ರಹ್ಮಯ್ಯ ಕಾಲನಿಯಲ್ಲಿ ತಲಾ 50 ಲಕ್ಷ ರೂ. ವೆಚ್ಚದಲ್ಲಿ ಲಿಂಕ್ ರಸ್ತೆಗಳ ಅಭಿವೃದ್ಧಿ ಮತ್ತು ಗುಗ್ಗರಹಟ್ಟಿಯಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ಮುಖ್ಯರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.