ಕುರುಗೋಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಜನಗಣತಿ ತರಬೇತಿ ಕೇಂದ್ರಕ್ಕೆ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್ ಭೇಟಿ ನೀಡಿದ್ದರು.  
ಬಳ್ಳಾರಿ

ಮೊಬೈಲ್ ಆ್ಯಪ್ ಮೂಲಕ ಜನಗಣತಿ

ಅಶೋಕ್ ಕುಮಾರ್ ಎನ್
ಕುರುಗೋಡು: ದೇಶದ ಅಭ್ಯುದಯಕ್ಕೆ ಯೋಜನೆ ರೂಪಿಸಲು ಜನಗಣತಿಯಲ್ಲಿ ಸಂಗ್ರಹಿಸುವ ಅಂಕಿ-ಅಂಶ ಅಡಿಪಾಯವಾಗಿದೆ. ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ತರಬೇತುದಾರರು ಸಮರ್ಪಕವಾಗಿ ತರಬೇತಿ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್ ಸೂಚಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಆಡಳಿತ ಹಾಗೂ ಪುರಸಭೆಯಿಂದ ಆಯೋಜಿಸಿದ್ದ ಜನಗಣತಿ ತರಬೇತಿ ಕಾರ್ಯಾಗಾರ ಸ್ಥಳಕ್ಕೆ ಭೇಟಿ ನೀಡಿ ಭಾನುವಾರ ಮಾತನಾಡಿದರು. ಮೊಬೈಲ್ ಆ್ಯಪ್ ಮೂಲಕ ಈ ಬಾರಿ ಜನಗಣತಿ ನಡೆಯಲಿದೆ. ಇದರಿಂದ ಕಾರ್ಯದಲ್ಲಿ ನಿಖರತೆ ಮತ್ತು ಪಾರದರ್ಶಕತೆ ಹೆಚ್ಚಲಿದೆ ಎಂದರು.
ಗಣತಿ ಕಾರ್ಯದಲ್ಲಿ ತೊಡಗುವ ಪ್ರತಿಯೊಬ್ಬರೂ ಇದನ್ನು ರಾಷ್ಟ್ರ ನಿಮಾರ್ಣಕ್ಕೆ ಸಲ್ಲಿಸುತ್ತಿರುವ ಅಳಿಲು ಸೇವೆ ಎಂದು ಭಾವಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಪ್ರತಿ ಗ್ರಾಮದಲ್ಲಿ 150 ರಿಂದ 200 ಕುಟುಂಬಗಳಿಗೊಂದು ಬ್ಲಾಕ್ ಎಂದು ಗುರುತಿಸಿ, ನಿಖರವಾದ ನಕ್ಷೆ ಮತ್ತು ಪಟ್ಟಿ ಸಿದ್ಧಪಡಿಸಬೇಕು. ಬ್ಲಾಕ್ ರಚನೆಯಲ್ಲಿ ಸಣ್ಣ ತಪ್ಪಾದರೂ ಇಡೀ ಪ್ರಕ್ರಿಯೆ ಹಳಿ ತಪ್ಪುತ್ತದೆ. ಆದ್ದರಿಂದ ಅಧಿಕಾರಿಗಳು ಪ್ರತಿ ಬ್ಲಾಕ್‌ಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಾಕೀತು ಮಾಡಿದರು.