ಸಿರಗುಪ್ಪ ತಾಲೂಕಿನ ತಾಳೂರು ಗ್ರಾಮದಲ್ಲಿ ಎಲ್‌ಇಡಿ ಪರದೆ ಅಳವಡಿಸಿ ಆರ್‌ಸಿಬಿ ಫೈನಲ್ ಪಂದ್ಯವನ್ನು ಯುವಕರು ವೀಕ್ಷಿಸಿದರು.
- ಎರಡನೇ ಬಾರಿಗೆ ಆರ್‌ಸಿಬಿ ವಿಜೇತ
- ಕ್ರೀಡಾಭಿಮಾನಿಗಳ ಸಂಭ್ರಮ
ಬಳ್ಳಾರಿ : ಐಪಿಎಲ್ 2026ರ ರೋಚಕ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮುತ್ತಿದ್ದಂತೆ, ತಡರಾತ್ರಿ ಜಿಲ್ಲಾದ್ಯಂತ ಕ್ರೀಡಾಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ನಗರ ಸೇರಿದಂತೆ ಹೊಸಪೇಟೆ ರಸ್ತೆ, ಕೌಲ್ ಬಜಾರ್, ಕಂಟೋನ್ಮೆಂಟ್, ಸಿರಗುಪ್ಪ, ಕಂಪ್ಲಿ ಮತ್ತು ಸಂಡೂರು ತಾಲೂಕುಗಳಲ್ಲೂ ಅಭಿಮಾನಿಗಳು ಬೀದಿಗಿಳಿದು ಸಂಭ್ರಮಿಸಿದರು.
ಈ ಸಲವೂ ಕಪ್ ನಮ್ಮದೇ ಎಂಬ ಘೋಷಣೆ ಕೂಗುತ್ತಾ, ಸಿಹಿ ಹಂಚಿ, ಪಟಾಕಿ ಸಿಡಿಸಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದರು. ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ತಂಡದ ಪೋಸ್ಟರ್‌ಗಳನ್ನು ಹಿಡಿದು ಯುವಕರು ಕುಣಿದು ಕುಪ್ಪಳಿಸಿದರು. ಕಳೆದ ಬಾರಿಯ ಕಾಲ್ತುಳಿತ ಘಟನೆ ಹಾಗೂ ಸಾರ್ವಜನಿಕ ಸುರಕ್ಷತೆ ಗಮನದಲ್ಲಿಟ್ಟುಕೊಂಡು, ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿತ್ತು.
ಆದ್ದರಿಂದ, ಗಡಗಿ ಚೆನ್ನಪ್ಪ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸಂಭ್ರಮದ ವೇಳೆ ಮದ್ಯಪಾನ ಮಾಡಿ, ಅತಿ ವೇಗವಾಗಿ ಬೈಕ್ ಚಾಲನೆ ಮಾಡುವುದು ಮತ್ತು ಸಾರ್ವಜನಿಕರಿಗೆ ತೊಂದರೆ ಕೊಡುವ ರೀತಿಯಲ್ಲಿ ಗಮನಿಸಿ ಸ್ವತಃ ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ಸ್ಥಳಕ್ಕೆ ಆಗಮಿಸಿ ಲಾಠಿ ಹಿಡಿದು ಯುವಕರ ಗುಂಪು ಚದರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಒಟ್ಟಾರೆ ಜಿಲ್ಲಾದ್ಯಂತ ಆರ್‌ಸಿಬಿ ಅಭಿಮಾನಿಗಳ ವಿಜಯೋತ್ಸವ ಜೋರಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಯಶಸ್ವಿಯಾಗಿ ಬಂದೋಬಸ್ತ್ ನಿರ್ವಹಿಸಿದ್ದಾರೆ.