ಸಂಡೂರಿನ ತಾಪಂದಲ್ಲಿ ಶಾಸಕಿ ಅನ್ನಪೂರ್ಣ ತುಕಾರಾಮ್ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಂಸದ ಈ.ತುಕಾರಾಮ್, ವಾಡಾ ಅಧ್ಯಕ್ಷ ಅಕ್ಷಯಲಾಡ್, ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್.ನೂರುದ್ದೀನ್, ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಡಗಿನ ಬಸಪ್ಪ ಇದ್ದರು. 
ಬಳ್ಳಾರಿ

ಮರ ಕಡಿದರೆ ಗಣಿ ಗುತ್ತಿಗೆ ರದ್ದುಪಡಿಸಿ

ಶಾಮಸುಂದರ್ ಕೊಪ್ಪಳಕರ್

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಸಂಸದ ಈ.ತುಕಾರಾಮ್ ತಾಕೀತು
  • ಸಂಡೂರಿನಲ್ಲಿ ಕೆಡಿಪಿ ಮೀಟಿಂಗ್
ಸಂಡೂರು: ಬನ್ನಿಹಟ್ಟಿ ರೈಲ್ವೆ ಯಾರ್ಡ್‌ನಲ್ಲಿ 12 ಸಾವಿರ ಮೆಟ್ರಿಕ್ ಟನ್ ಅದಿರು ಕಳ್ಳತನವಾಗಿದ್ದು, ಕಳ್ಳರು ಯಾರೆಂದು ಪತ್ತೆಯಾಗ ಬೇಕಿದೆ ಎಂದು ಸಂಸದ ಈ.ತುಕಾರಾಮ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೋಮವಾರ ಮಾತನಾಡಿದರು. ಎನ್‌ಎಂಡಿಸಿಯಲ್ಲಿ ಅಕ್ರಮವಾಗಿ ಅದಿರು ಸಾಗಾಣಿಕೆಯಾಗಿದೆ. ನಿಗದಿಗಿಂತ ಹೆಚ್ಚಿನ ಅದಿರು ಸಾಗಣೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳಲಿಲ್ಲ. ಈ ಎರಡೂ ಪ್ರಕರಣಗಳನ್ನು ಎಸ್‌ಐಟಿಗೆ ವಹಿಸುವಂತೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಗಣಿ ಪ್ರದೇಶದಲ್ಲಿ ಅಕ್ರಮವಾಗಿ ಮರಗಳನ್ನು ಕಡಿದರೆ ಕೂಡಲೇ ಅವರ ಗಣಿ ಗುತ್ತಿಗೆ ರದ್ದುಗೊಳಿಸಬೇಕು ಎಂದು ಅರಣ್ಯಾಧಿಕಾರಿಗಳಿಗೆ ಸಂಸದ ತುಕಾರಾಮ್ ನಿರ್ದೇಶನ ನೀಡಿದರು. ಯಶವಂತನಗರ ಸೇರಿದಂತೆ ಹಲವೆಡೆ ಅಕ್ರಮವಾಗಿ ಚಾಲನಾ ಪರವಾನಗಿ ಪಡೆದುಕೊಂಡು ಲಾರಿಗಳನ್ನು ಓಡಿಸಲಾಗುತ್ತಿದೆ. ಈ ಕುರಿತು ಗಮನ ಹರಿಸಿ ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಡಿಡಿಎಲ್‌ಆರ್, ಡಿಪೋ ವ್ಯವಸ್ಥಾಪಕ, ವಾಣಿಜ್ಯ ಇಲಾಖೆ ಅಧಿಕಾರಿ ಸೇರಿದಂತೆ ಸಭೆಗೆ ಗೈರಾದವರಿಗೆ ನೋಟಿಸ್ ನೀಡಬೇಕು. ಪಟ್ಟಣದಲ್ಲಿ ಕಳ್ಳತನ ಪ್ರಕಣಗಳು ಹೆಚ್ಚಿತ್ತಿವೆ. ಶಾಲೆ, ಕಾಲೇಜು ಆರಂಭ ಮತ್ತು ಮುಗಿದ ಬಳಿಕ ಪುಂಡರ ಕಾಟ ಹೆಚ್ಚಿದ್ದು ಪೊಲೀಸ್ ಗಸ್ತು ಹೆಚ್ಚಿಸಬೇಕು. ಕೋಟ್ಯಂತರ ರೂ. ಚೀಟಿ ದಂಧೆ ನಡೆಯುತ್ತಿವೆ ಎಂಬ ದೂರುಗಳು ಕೇಳಿ ಬಂದಿದ್ದು, ನಿಯಂತ್ರಿಸಿ ಎಂದು ಅಧಿಕಾರಿಗಳಿಗೆ ಸಂಸದ ಈ.ತುಕಾರಾಮ್ ಸೂಚಿಸಿದರು.
ಶಾಸಕಿ ಅನ್ನಪೂರ್ಣ ತುಕಾರಾಮ್ ಮಾತನಾಡಿ, ದರೋಜಿ ಭಾಗದಲ್ಲಿ ಕ್ಯಾನ್ಸರ್ ಪ್ರಕರಣಗಳು ಕಂಡು ಬಂದಿವೆ. ಮುಂಜಾಗ್ರತೆಯಾಘಿ ರಕ್ತದ ಕ್ಯಾನ್ಸರ್ ಹಾಗೂ ಹೃದಯಾಘಾತದ ಪ್ರಕರಣಗಳನ್ನು ಪತ್ತೆ ಹಚ್ಚಬೇಕು. ಕಾರ್ಖಾನೆಗಳು ತ್ಯಾಜ್ಯ ನೀರನ್ನು ದರೋಜಿ ಕೆರೆಗೆ ಬಿಡುತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ತಪಾಸಣೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಾಲೂಕಿನಲ್ಲಿ ಬಾಲ್ಯ ವಿವಾಹ ನಡೆಯುತ್ತಿವೆ. ಮಹಿಳಾ ಶಾಸಕರಿರುವ ಕ್ಷೇತ್ರದಲ್ಲಿ ಇಂತಹ ಪ್ರಕರಣಗಳು ಶೋಭೆ ತರುವುದಿಲ್ಲ ಎಂದರು.
ಸಿಡಿಪಿಒ ಪಿ.ನಾಗರಾಜ್ ಮಾತನಾಡಿ, ಬಾಲ ಗರ್ಭಿಣಿಯರಿಗೆ ಸಂಬಂಧಿಸಿದಂತೆ 35 ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಗ್ರಾಪಂ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗಿದೆ. ಕಡಿಮೆ ತೂಕ ಹೊಂದಿದ 108 ಗರ್ಭಿಣಿಯರು ಇದೀಗ ಸಮತೂಕದತ್ತ ಸಾಗುತ್ತಿದ್ದಾರೆಂದರು.

ಟಿಎಚ್‌ಒ ವಿರುದ್ಧ ಅಸಮಾಧಾನ

ಪಟ್ಟಣದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನವಿದ್ದರೂ ಈವೆರೆಗೆ ಡಿಪಿಆರ್ ಮಾಡಿಲ್ಲ. ತೋರಣಗಲ್‌ನಲ್ಲಿ 50 ಹಾಸಿಗೆ, ಚೋರನೂರಿನಲ್ಲಿ 30 ಹಾಸಿಗೆ, ಯಶವಂತನಗರ, ಸುಶೀಲಾನಗರ, ದರೋಜಿ, ಕುರೇಕುಪ್ಪ, ಭುಜಂಗನಗರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾಗಿದ್ದರೂ ಕಾಮಗಾರಿ ಶುರು ಮಾಡದಿರುವ ಬಗ್ಗೆ ಟಿಎಚ್‌ಒ ಡಾ.ಭರತ್ ಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.