ಕುರುಗೋಡಿನ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ನೀಡಲಾಯಿತು.
ಕುರುಗೋಡು: ರೈತರಿಗೆ ಮುಂಗಾರು ಹಂಗಾಮಿಗೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಬಿತ್ತನೆಬೀಜ ನೀಡಲಾಗುತ್ತಿದೆ ಎಂದು ಕೃಷಿ ಅಧಿಕಾರಿ ದೇವರಾಜ್ ತಿಳಿಸಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಿ ಮಂಗಳವಾರ ಮಾತನಾಡಿದರು. ತಾಲೂಕಿನಲ್ಲಿ ಕಳೆದ ವಾರದಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರು ಅಧಿಕ ಹಣ ನೀಡಿ ಖಾಸಗಿ ಅಂಗಡಿಗಳಲ್ಲಿ ಬಿತ್ತನೆಬೀಜ ಖರೀದಿಸುವ ಬದಲು ಆಧಾರ್ ಕಾರ್ಡ್, ಎಫ್‌ಐಡಿ, ಇತ್ತೀಚಿನ ಪಹಣಿ ಪ್ರತಿ ನೀಡಿದರೆ ಸಹಾಯಧನ ಯೋಜನೆಯಡಿ ಕಡಿಮೆ ಬೆಲೆಗೆ ರೈತಸಂಪರ್ಕ ಕೇಂದ್ರದಿಂದ ಬಿತ್ತನೆಬೀಜ ನೀಡಲಾಗುವುದು. ಸದ್ಯ ತೊಗರಿ, ಮೆಕ್ಕೆಜೋಳ, ಭತ್ತ, ಸಿರಿಧಾನ್ಯ ಲಭ್ಯವಿದೆ. ಬೆಳೆಗೆ ಬಾಧಿಸುವ ಶೀಲಿಂದ್ರ, ಕೀಟಗಳು ಇತರ ರೋಗ ನಿಯಂತ್ರಣಕ್ಕೆ ಔಷಧವೂ ಲಭ್ಯ ಇದೆ. ಅಗತ್ಯ ದಾಖಲೆ ನೀಡಿ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.