ಬಳ್ಳಾರಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿರುವ ಮೆಕ್ಕೆಜೋಳ ಬೆಳೆ 
ಬಳ್ಳಾರಿ

ಎಪಿಎಂಸಿಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಪರವಾನಗಿದಾರ
ಬಳ್ಳಾರಿ : ಇಲ್ಲಿನ ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಂಪಿಎಂಸಿ)ಯಲ್ಲಿ ಪರವಾನಗಿದಾರ ಹಮಾಲರ ನಾನಾ ಬೇಡಿಕೆಗಳ ಈಡೇರಿಕಗಾಗಿ ಒತ್ತಾಯಿಸಿ, ಮಂಗಳವಾರ ಹಮಾಲರ ಸಂಘದಿಂದ ಮುಷ್ಕರ ಮುಂದುವರಿಯಿತು.
ಉತ್ಪನ್ನಗಳನ್ನು ಚೀಲಕ್ಕೆ ತುಂಬುವುದು, ಸುರಿಯುವುದು, ತೂಕ ಹಾಕುವುದಕ್ಕೆ ಚೀಲಕ್ಕೆ 15 ರೂ. ನೀಡಬೇಕು. ಖಾಲಿ ಚೀಲಗಳನ್ನು ಖರೀದಾರರ ಬಳಿಯಿಂದ ದಲ್ಲಾಳಿಗಳ ಬಳಿಗೆ ತರಲು ಪ್ರತಿ ಚೀಲಕ್ಕೆ 30 ಪೈಸೆ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಹಮಾಲರು ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಪ್ರತಿಭಟಿಸಿದ್ದಾರೆ.
ಎಪಿಎಂಸಿ ಮಾರುಕಟ್ಟೆಯಲ್ಲಿ ನೂರಾರು ಹಮಾಲರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮಂಗಳವಾರವೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮಾರುಕಟ್ಟೆಗೆ ಬಂದಿದ್ದರು. ಆದರೆ ಕೆಲಸಗಾರರಿಲ್ಲದೆ ಚೀಲಗಳ ವರ್ಗಾವಣೆ ಸ್ಥಗಿತಗೊಂಡು, ಹರಾಜು ಪ್ರಕ್ರಿಯೆ ನಡೆಯಲಿಲ್ಲ. ಇದರಿಂದಾಗಿ ಮಾರುಕಟ್ಟೆಗೆ ಬೆಳೆ ತಂದಿದ್ದ ರೈತರು ಸಂಕಷ್ಟ ಎದುರಿಸುವಂತಾಯಿತು. ಮಂಗಳವಾರ ಮಧ್ಯಾಹ್ನದ ನಂತರ ಕಳೆದ ಎರಡ್ಮೂರು ದಿನದ ಹಿಂದೆ ಮಾರುಕಟ್ಟೆಗೆ ತಂದಿದ್ದ ಫಸಲು ಮಾತ್ರ ಟೆಂಡರ್ ಪ್ರಕ್ರಿಯೆ ನಡೆದು ವಹಿವಾಟು ನಡೆಯಿತು. ಉಳಿದಂತೆ ಹೊಸದಾಗಿ ತಂದಿದ್ದ ಫಸಲಿಗೆ ಟೆಂಡರ್ ಪ್ರಕ್ರಿಯೆ ನಡೆದಿಲ್ಲ ಎಂಬುದಾಗಿ ದಲ್ಲಾಳಿಯೊಬ್ಬರು ತಿಳಿಸಿದರು.
ಕೋಟ್.. ಹಮಾಲಿಗಳ ನಾನಾ ಬೇಡಿಕೆಗಳ ಈಡೇರಿಸುವಂತೆ ಪ್ರತಿಭಟಿಸಿ ಮುಷ್ಕರ ನಡೆಸಿದ್ದರು. ಸದ್ಯ ವರ್ತಕರು, ದಲ್ಲಾಳಿ ಹಾಗೂ ಹಮಾಲರ ಜತೆ ಸಭೆ ಕರೆದು ಹೊಂದಾಣಿಕೆ ಮಾಡಲಾಗಿದೆ. ಮಂಗಳವಾರ ಮಧ್ಯಾಹ್ನದಿಂದ ವ್ಯಾಪಾರ ವಹಿವಾಟು ನಡೆದಿದ್ದು, ಬುಧವಾರ ಯಥಾಸ್ಥಿತಿಯಲ್ಲಿ ವ್ಯಾಪಾರ ನಡೆಯಲಿದೆ.
- ಆರ್.ಜಯಕುಮಾರ, ಕಾರ್ಯದರ್ಶಿ, ಎಪಿಎಂಸಿ, ಬಳ್ಳಾರಿ