ಬಳ್ಳಾರಿಯ ಡಿಸಿ ಕಚೇರಿ ಮುಂಭಾಗದಲ್ಲಿ ಹರಗಿನಡೋಣಿ ಗ್ರಾಮದಲ್ಲಿ ಕುಡಿಯುವ ನೀರಿನ ಕೆರೆ ನಿರ್ಮಿಸುವಂತೆ ಪ್ರತಿಭಟನೆ ನಡೆಯಿತು. ಅಧ್ಯಕ್ಷ ಆರ್.ಸೋಮಶೇಖರಗೌಡ, ಪದಾಧಿಕಾರಿಗಳಾದ ಎ.ದೇವದಾಸ್, ಡಿ.ನಾಗಲಕ್ಷ್ಮೀ, ಆರ್.ಶಿವರಾಮ ರೆಡ್ಡಿ, ಈರಣ್ಣ, ಬಿ.ಹನುಮಂತಪ್ಪ ಇತರರಿದ್ದರು. 
ಬಳ್ಳಾರಿ

ಕುಡಿವ ನೀರಿನ ಕೆರೆ ನಿರ್ಮಿಸಿ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಟನೆ
ಬಳ್ಳಾರಿ : ಕೆಎಂಆರ್‌ಇಸಿ ಅನುದಾನ ಬಳಿಸಿ ಹರಗಿನಡೋಣಿ ಗ್ರಾಮದಲ್ಲಿ ಕುಡಿವ ನೀರಿನ ಕೆರೆ ನಿರ್ಮಿಸಬೇಕು ಎಂದು ಆಗ್ರಹಿಸಿ, ಇಲ್ಲಿನ ಡಿಸಿ ಕಚೇರಿ ಮುಂಭಾಗದಲ್ಲಿ ಗಣಿಬಾಧಿತ ಪರಿಸರ ಮತ್ತು ಜನ ಬದುಕಿನ ಪುನಶ್ಚೇತನ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ಹೋರಾಟ ಸಮಿತಿಯ ಅಧ್ಯಕ್ಷ ಆರ್.ಸೋಮಶೇಖರ್‌ಗೌಡ ಮಾತನಾಡಿ, ದಶಕಗಳ ಕಾಲ ನಡೆದ ಅಕ್ರಮ ಗಣಿಗಾರಿಕೆಯಿಂದ ಜಿಲ್ಲೆಯ ಪರಿಸರ ಹಾಗೂ ಜನರ ಬದುಕು ದುಸ್ತರವಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಸ್ಥಾಪಿತವಾಗಿರುವ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಬಳಿ 35 ಸಾವಿರ ಕೋಟಿ ರೂ., ಅಧಿಕ ಹಣವಿದ್ದರೂ, ಗಣಿ ಬಾಧಿತ ಗ್ರಾಮಗಳ ಅಭಿವೃದ್ಧಿಗೆ ಬಳಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹರಗಿನಡೋಣಿ ಗ್ರಾಮದ ಜನರ ಬಹುದಿನಗಳ ಬೇಡಿಕೆಯಾದ ಕುಡಿಯುವ ನೀರಿನ ಕೆರೆಯನ್ನು ಕೂಡಲೇ ನಿರ್ಮಿಸಬೇಕು. ನಿವೇಶನ ರಹಿತರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು. ಗ್ರಾಮದ ಸರಕಾರಿ ಶಾಲೆಯನ್ನು ಮೇಲ್ದರ್ಜೆಗೇರಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ಸಿಬ್ಬಂದಿ ನೇಮಿಸಿ ಕಾರ್ಯಾರಂಭ ಮಾಡಬೇಕು ಜತೆಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಮಹಿಳೆಯರಿಗೆ ಕೌಶಲಧಾರಿತ ತರಬೇತಿ ನೀಡಿ ಉದ್ಯೋಗ ನೀಡಬೇಕು. ಗಣಿ ಕಾರ್ಮಿಕರಿಗೆ ಪರ್ಯಾಯ ಜೀವನೋಪಾಯ ಒದಗಿಸಬೇಕು. ನಿಯಮ ಗಾಳಿಗೆ ತೂರಿ ಮಾಲಿನ್ಯ ಉಂಟುಮಾಡುತ್ತಿರುವ ಕಬ್ಬಿಣದ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಯುವಕರು, ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ ವಿನೂತವಾಗಿ ಪ್ರತಿಟಿಸಿದರು. ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.