ಬಳ್ಳಾರಿಯಲ್ಲಿ ಆಯೋಜಿಸಿದ್ದ ಬಿಟಿಪಿಎಸ್ 57ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೆಪಿಸಿಎಲ್ ನಿ. ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಮೃತ್ಯುಂಜಯ ಅವರನ್ನು ಸನ್ಮಾನಿಸಲಾಯಿತು. ಬಿಟಿಪಿಎಸ್ ಇಡಿ ಕೆ.ಆರ್.ಗಂಗಾಧರಯ್ಯ, ಇಂಜನಿಯರ್‌ಗಳಾದ ಅಶೋಕ ಕುಮಾರ್ ಎಚ್., ಮಲ್ಲಿಕಾರ್ಜುನ ಬಿ. ಮುಟಗಾರ್, ನರೇಂದ್ರ ರಾವ್ ಕುಲಕರ್ಣಿ, ಪ್ರಧಾನ ನಿಬಂಧಕರಾದ ಶಿವಲಾಲ್ ಜಿ.ನಾಯ್ಕ, ರಾಮಪ್ಪ ಇದ್ದರು. 
ಬಳ್ಳಾರಿ

ಬಿಟಿಪಿಎಸ್‌ಗೆ ಬೆಸ್ಟ್ ಪವರ್ ಪ್ರಾಜೆಕ್ಟ್ ಗರಿ

ಪ್ರಮುಖ ಮುಖ್ಯಾಂಶಗಳು

  • 57ನೇ ಸಂಸ್ಥಾಪನಾ ದಿನಾಚರಣೆ
  • ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ
ಬಳ್ಳಾರಿ : ದೇಶಾದ್ಯಂತ ಸೂರ್ಯ ಕೇವಲ 12 ಗಂಟೆ ಮಾತ್ರ ಬೆಳಕು ನೀಡಿದರೆ, ರಾಜ್ಯದ ವಿದ್ಯುತ್ ನಿಗಮದ ಘಟಕಗಳು ದಿನದ 24 ಗಂಟೆಯೂ ನಿರಂತರವಾಗಿ ಬೆಳಕು ನೀಡುತ್ತಿವೆ ಎಂದು ಬಿಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಆರ್. ಗಂಗಾಧರಯ್ಯ ಹೇಳಿದರು.
ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಬಿಟಿಪಿಎಸ್)ನ 57ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಳೆ ಕೊರತೆಯ ತೀವ್ರ ಸವಾಲಿನ ನಡುವೆಯೂ ಅತ್ಯುತ್ತಮವಾಗಿ ವಿದ್ಯುತ್ ಉತ್ಪಾದನೆ ಮಾಡಿರುವ ಹಿನ್ನೆಲೆ ಮೂರು ವಿದ್ಯುತ್ ಕೇಂದ್ರಗಳ ಮೂರು ಘಟಕಗಳಿಗೆ ಕೇಂದ್ರ ವಿದ್ಯುತ್ ಪ್ರಾಧಿಕಾರವು ಬೆಸ್ಟ್ ರನ್ ಯೂನಿಟ್ ಪ್ರಶಸ್ತಿ ಘೋಷಿಸಿದೆ. ಇದರೊಂದಿಗೆ ಈ ಕೇಂದ್ರಕ್ಕೆ ಬೆಸ್ಟ್ ಪವರ್ ಪ್ರಾಜೆಕ್ಟ್ ಪ್ರಶಸ್ತಿಯೂ ಒಲಿದಿದೆ. ತಾಲೂಕಿನ ಕುಡತಿನಿಯ ಬಿಟಿಪಿಎಸ್ ವಿದ್ಯುತ್ ಕೇಂದ್ರದ ಎರಡನೇ ಘಟಕವೂ ಈ ಹೆಮ್ಮೆಯ ಪ್ರಶಸ್ತಿಗೆ ಭಾಜನವಾಗಿದೆ. ಈ ರೀತಿಯ ಗೌರವಗಳು ನೌಕರರಲ್ಲಿ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಪ್ರೇರಣೆ ನೀಡಲಿವೆ ಎಂದು ತಿಳಿಸಿದರು. ಬಿಟಿಪಿಎಸ್ ಘಟಕದಿಂದ ಸಾವಿರಾರು ಜನರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸಿಕ್ಕಿದ್ದು, ಸ್ಥಳೀಯರ ಆರ್ಥಿಕ ಪ್ರಗತಿಗೆ ನೆರವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮತ್ತಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ಭರವಸೆ ನೀಡಿದರು.
ಕೆಪಿಸಿಎಲ್ ನಿವೃತ್ತ ಹಿರಿಯ ಸಹಾಯಕ ಕೆ.ಎಸ್. ಗುಂಡಪ್ಪ ನಾಯಕ್ ಮಾತನಾಡಿ, ಬಿಟಿಪಿಎಸ್‌ನಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಎಂಬ ಯಾವುದೇ ತಾರತ್ಯಮವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿರುವುದೇ ಈ ಕೇಂದ್ರ ಮಟ್ಟದ ಪ್ರಶಸ್ತಿಗೆ ಕಾರಣ ಎಂದರು.
ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣೆ : ಕಾರ್ಯಕ್ರಮದಲ್ಲಿ ಬಿಟಿಪಿಎಸ್ ಸಿಬ್ಬಂದಿಯ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕ್ರಿಕೆಟ್, ಚೆಸ್ ಹಾಗೂ ಚಲನಚಿತ್ರ ಗೀತೆ, ಭಾವಗೀತೆ, ಭಕ್ತಿಗೀತೆ ಮತ್ತು ಜನಪದ ಗೀತೆಗಳ ಗಾಯನ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಿಟಿಪಿಎಸ್‌ನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಇದ್ದರು.