- ಬಿಜೆಪಿ ಬಳ್ಳಾರಿ ಸಹ ಪ್ರಭಾರಿ ಚನ್ನಬಸವನಗೌಡ ಪಾಟೀಲ್ ಹೇಳಿಕೆ
- 9ರಂದು ಚಿತ್ರದುರ್ಗದಲ್ಲಿ ಕಾರ್ಯಕ್ರಮ ಆಯೋಜನೆ
ಕೂಡ್ಲಿಗಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಾಜದ ಶಕ್ತಿಯಾಗಿದ್ದಾರೆ ಎಂದು ಬಿಜೆಪಿ ಬಳ್ಳಾರಿ ಸಹ ಪ್ರಭಾರಿ ಚನ್ನಬಸವನಗೌಡ ಪಾಟೀಲ್ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನ ಹೂವಿನ ಹಾಸಿಗೆಯಾಗಿರಲಿಲ್ಲ. ಅನೇಕ ಏಳು-ಬೀಳುಗಳನ್ನು ಅನುಭವಿಸಿದ್ದಾರೆ. 70 ರ ದಶಕದಲ್ಲಿ ಬಿಜೆಪಿ ರಾಜ್ಯದಲ್ಲಿ ಸಸಿಯಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ರಾಜ್ಯದ ಉದ್ದಗಲ ಸಂಚರಿಸಿ ಪಕ್ಷ ಸಂಘಟನೆ ಮಾಡಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಸೈಕಲ್‌ನಲ್ಲಿ ಬಹುತೇಕ ಗ್ರಾಮಗಳಲ್ಲಿ ತಿರುಗಾಡಿ ಪಕ್ಷದ ಬಾವುಟ ಕಟ್ಟಿದರು ಎಂದು ಹೇಳಿದರು.
ವಿರೋಧ ಪಕ್ಷದಲ್ಲಿ 30 ವರ್ಷಗಳ ಅನುಭವ ಹೊಂದಿ ರಾಜ್ಯದ ಮುಖ್ಯಮಂತ್ರಿಯಾಗಿ ಜನ ಸಾಮ್ಯಾನರಿಗೆ ಅನೇಕ ಯೋಜನೆಗಳನ್ನು ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಉಚಿತ ಸೈಕಲ್, ಭಾಗ್ಯಲಕ್ಷ್ಮೀ ಯೋಜನೆ, ರೈತರಿಗೆ ಅನೇಕ ಸೌಲಭ್ಯಗಳನ್ನು ನೀಡಿದ್ದಾರೆ. ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ಕೆರೆ ನೀರು ತುಂಬಿಸಲು 800 ಕೋಟಿ ಅನುದಾನ ನೀಡಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದರು.
ಬಿ.ಎಸ್.ಯಡಿಯೂರಪ್ಪ ಅಭಿಮಾನೋತ್ಸವ ಪಕ್ಷಾತೀತವಾಗಿದ್ದು, ಅವರ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಇದಕ್ಕೆ ರಾಜಕೀಯ ಬೆರೆಸುವುದು ಬೇಡ. ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ತಾಲೂಕಿನಿಂದ 15 ಸಾವಿರ ಜನರು ಪಾಲ್ಗೊಳ್ಳಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಂಡಲ ಅಧ್ಯಕ್ಷ ಕೆ.ನಾಗರಾಜ ಬಣವಿಕಲ್ಲು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಳಿಗಿ ವೀರೇಂದ್ರ ಕುಮಾರ್, ಜಿಲ್ಲಾ ಉಪಾಧ್ಯ ಬಲ್ಲಾಹುಣಿಸಿ ರಾಮಣ್ಣ, ನಿಕಟ ಪೂರ್ವ ಜಿಲ್ಲಾ ಉಪಾಧ್ಯಕ್ಷೆ ದೀನಾ ಮಂಜುನಾಥ್, ಪವಿತ್ರಾಬಾಯಿ ಹನುಮಂತಪ್ಪ, ಮಂಡಲ ಪ್ರಧಾನ ಕಾರ್ಯದರ್ಶಿ ಪಿ.ಮಂಜುನಾಥ ನಾಯಕ, ಎ.ಎಂ.ವಾಗೀಶ್ ಮೂರ್ತಿ, ಅಜಯ್ ಕುಮಾರ್, ಪ್ರಕಾಶ್ ನಾಯ್ಕ, ಲಕ್ಷ್ಮೀಬಾಯಿ ಕಾಂತರಾಜ್, ವೆಂಕಟೇಶ್ ನಾಯ್ಕ ಇದ್ದರು.