ಹರಪನಹಳ್ಳಿ: ಆಸ್ತಿಗಾಗಿ ಅಣ್ಣನನ್ನು ಕೊಲೆಗೈದು ಅಪಘಾತವೆಂದು ಬಿಂಬಿಸಿದ್ದ ಮೃತನ ತಮ್ಮ ಹಾಗೂ ಮತ್ತೊಬ್ಬ ಆರೋಪಿಯನ್ನು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ನಗರದ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಹಗರಿಶೀರನಹಳ್ಳಿ ಗ್ರಾಮದ ಮರುಳಸಿದ್ದೇಶ (26) ಮೃತ. ಮೃತನ ತಮ್ಮ ಪತ್ರಿಗೌಡ (24) ಹಾಗೂ ಸಂಬಂಧಿ ಕಡಬಗೇರಿ ಗ್ರಾಮದ ಉತ್ತಂಗಿ ನಾರಪ್ಪ (29) ಕೊಲೆ ಆರೋಪಿಗಳು. ಮರುಳಸಿದ್ದೇಶ ಕುಟುಂಬದ ಜವಾಬ್ದಾರಿ ಹೊತ್ತಿದ್ದು, ಪತ್ರಿಗೌಡ ಪದೇ ಪದೇ ಕುಡಿತಕ್ಕೆ ಹಣ ನೀಡುವಂತೆ ತಾಯಿ ಹಾಗೂ ಅಣ್ಣನನ್ನು ಪೀಡಿಸುತ್ತಿದ್ದ. ಹಣ ನೀಡಲು ನಿರಾಕರಿಸಿದಾಗ ಆಸ್ತಿ ಪಾಲುದಾರಿಕೆಗಾಗಿ ಆಗಾಗ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಜಗಳ ತೀವ್ರ ಸ್ವರೂಪ ಪಡೆದು ಕೆಲಸ ಅರಸಿ ತೆರಳುವುದಾಗಿ ಪತ್ರಿಗೌಡ ಶುಕ್ರವಾರ ತಿಳಿಸಿದ್ದ. ಆಗ ತಮ್ಮನನ್ನು ಹುಡುಕಲು ಸಂಬಂಧಿ ಉತ್ತಂಗಿ ನಾರಪ್ಪನೊಂದಿಗೆ ಮರುಳಸಿದ್ದೇಶ ಬೈಕ್‌ನಲ್ಲಿ ತೆರಳಿದ್ದರು.
ರಾತ್ರಿ 10.30ರ ಸುಮಾರಿಗೆ ಮರುಳಸಿದ್ದೇಶನು ತಮ್ಮ ಹಾಗೂ ಉತ್ತಂಗಿ ನಾರಪ್ಪನೊಂದಿಗೆ ಮನೆಗೆ ಬರುತ್ತಿರುವುದಾಗಿ ತಾಯಿಗೆ ತಿಳಿಸಿದ್ದರು. ಆದರೆ ರಾತ್ರಿ ಒಂದು ಗಂಟೆ ಸುಮಾರಿನಲ್ಲಿ ಹಿರೇಮೇಗಳಗೇರಿ-ಪುಣಭಘಟ್ಟ ಮುಖ್ಯ ರಸ್ತೆಯ ಹೊಸಹಳ್ಳಿ ಕ್ರಾಸ್ ಬಳಿ ಅಪಘಾತದಲ್ಲಿ ಮರುಳಸಿದ್ದೇಶ ಮೃತಪಟ್ಟಿದ್ದಾನೆ ಎಂದು ದೂರದ ಸಂಬಂಧಿಗೆ ಆರೋಪಿಗಳು ಕರೆ ಮಾಡಿ ತಿಳಿಸಿದ್ದರು.
ಆದರೆ ಮೃತನ ಮೇಲೆ ಅಪಘಾತದ ಗಾಯಗಳು ಇಲ್ಲದೆ ಇರುವುದನ್ನು ಗಮನಿಸಿದ ತಾಯಿ, ಸಂಶಯಗೊಂಡು ಪೋಲೀಸರಿಗೆ ಕೊಲೆಯ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಸಿಪಿಐ ಮಹಂತೇಶ್ ಸಜ್ಜನ್ ಪ್ರಕರಣದ ತನಿಖೆ ಆರಂಭಿಸಿದ್ದರು. ಮೃತನ ತಮ್ಮ ಪತ್ರಿಗೌಡ ಹಾಗೂ ಸಂಬಂದಿ ಉತ್ತಂಗಿ ನಾರಪ್ಪನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ಸಂಚು ಬಯಲಾಗಿದೆ. ವಿಜಯನಗರ ಎಸ್ಪಿ ಎಸ್.ಜಾಹ್ನವಿ, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.