ಸಿರಗುಪ್ಪ ನೇತಾಜಿ ವ್ಯಾಯಾಮ ಶಾಲೆಯ ಬಯಲು ರಂಗಮಂದಿರದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ತಹಸೀಲ್ದಾರ್ ಗೌಸೀಯಾ ಬೇಗಂ ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ, ಎಸ್.ಕೆ.ಆರ್.ಜಿಲಾನಿ ಬಾಷಾ, ಕುರುವಳ್ಳಿ ತಿಮ್ಮಯ್ಯ ಇತರರಿದ್ದರು.
- ತಹಸೀಲ್ದಾರ್ ಗೌಸೀಯಾ ಬೇಗಂ ಸಲಹೆ
ಸಿರಗುಪ್ಪ: ಮುಂದಿನ ಪೀಳಿಗೆಗೆ ಕನ್ನಡದ ಸಂಸ್ಕೃತಿ, ಇತಿಹಾಸ ಮತ್ತು ಗ್ರಾಮೀಣ ಕಲೆ-ಕಲಾವಿದರನ್ನು ಪರಿಚಯಿಸುವುದು ಎಲ್ಲರ ಕರ್ತವ್ಯ ಎಂದು ತಹಸೀಲ್ದಾರ್ ಗೌಸೀಯಾ ಬೇಗಂ ಹೇಳಿದರು.
ನೇತಾಜಿ ವ್ಯಾಯಾಮ ಶಾಲೆಯ ಬಯಲು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಆಯೋಜಿಸಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಭಾಷೆ ಮತ್ತು ಸಂಸ್ಕೃತಿ ಅತ್ಯಂತ ಶ್ರೀಮಂತ ಹಾಗೂ ಪ್ರಾಚೀನವಾಗಿದೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪಾಲಕರು ಮಕ್ಕಳನ್ನು ಕರೆತರಬೇಕು ಎಂದರು.
ನೃತ್ಯ ಕಲಾವಿದ ಜಿಲಾನಿ ಬಾಷಾ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲೆಯ ಕಲಾವಿದರಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದೆ. ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ ವೇದಿಕೆಗಳ ಮೂಲಕ ಯುವ ಪ್ರತಿಭೆಗಳು ಹಾಗೂ ಹಿರಿಯ ಕಲಾವಿದರಿಗೆ ಉತ್ತಮ ಅವಕಾಶ ಕಲ್ಪಿಸಲಾಗಿದೆ. ಯುವಕರು ಕಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಇದಕ್ಕೂ ಮುನ್ನ ಕಾರ್ಯಕ್ರಮದ ಮೆರವಣಿಗೆ ನಡೆಯಿತು.