ಬಿಜೆಪಿಗರು ಪರ್ಯಾಯ ಕ್ಷೇತ್ರ ಹುಡುಕಾಟ
- ಕಾಂಗ್ರೆಸ್ ಶಾಸಕರು ಕ್ಷೇತ್ರ ಬಿಗಿ ಹಿಡಿತ
ಬಳ್ಳಾರಿ : ಒಂದು ಕಾಲದಲ್ಲಿ ಜಿಲ್ಲೆಯನ್ನು ಕಮಲದ ಕೋಟೆಯಿಂದ ಅರಳಿಸಿದ್ದ ಬಿಜೆಪಿ ನಾಯಕರು ಸದ್ಯದ ಪರಿಸ್ಥಿತಿಯಲ್ಲಿ ಪರ್ಯಾಯ ಕ್ಷೇತ್ರಗಳತ್ತ ಹುಡುಕಾಟ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಳೆದ ಎರಡು ದಶಕದ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಗಣಿ ಜಿಲ್ಲೆಯನ್ನು ಬೇಧಿಸಿದ್ದ ರೆಡ್ಡಿ ಬ್ರದರ್ಸ್, ಬಿ.ಶ್ರೀರಾಮುಲು ಸಂಬಂಧಿಗಳು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡು ಸಚಿವ ಸಂಪುಟದಲ್ಲಿ ಉನ್ನತ ಖಾತೆಗಳ ಪಡೆದ ಖ್ಯಾತಿ ಹೊಂದಿದ್ದರು.
ಆದರೆ, ವಾಲ್ಮೀಕಿ ಹಗರಣದ ಹಿನ್ನಲೆ ಶಾಸಕ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಜತೆಗೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವೆ ‘ಜನತಾ ನ್ಯಾಯಾಲಯ’ಕ್ಕಿಳಿಯೋಣ (ಚುನಾವಣಾ ಕಣ) ಎಂಬುದಾಗಿ ಮಾಜಿ ಸಚಿವ ಬಿ.ಶ್ರೀರಾಮುಲುಗೆ ಬಹಿರಂಗ ಸವಾಲು ಹಾಕಿದರೂ ಸ್ವೀಕರಿಸುತ್ತಿಲ್ಲ.
ಅಲ್ಲದೇ, ಸ್ವತಃ ಶಾಸಕ ಜನಾರ್ದನರೆಡ್ಡಿ ಅವರೇ ನಾಗೇಂದ್ರ ವಿರುದ್ಧ ಶ್ರೀರಾಮುಲು ಕಣಕ್ಕೆ ಇಳಿಸುವುದಾಗಿ ಸವಾಲು ಸ್ವೀಕರಿಸದೆ ಕಾಂಗ್ರೆಸ್‌ನ ಹತ್ತು ಶಾಸಕರು ರಾಜೀನಾಮೆ ನೀಡಿ, ಚುನಾವಣೆ ಎದುರಿಸಲಿ ಎನ್ನುವ ಮೂಲಕ ನುಣಚಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಗ್ರಾಮೀಣ ಕ್ಷೇತ್ರದಲ್ಲಿ ಶೇ.40ಕ್ಕೂ ಅಧಿಕ ಮುಸ್ಲಿಂ ಮತಗಳ ಬೆಂಬಲದಿಂದ ನಾಗೇಂದ್ರ ನೇರವಾಗಿ ಪಂಥಾಹ್ವಾನಕ್ಕೆ ರಾಮುಲುಗೆ ಸವಾಲು ಎಸೆದಿದ್ದಾರೆ. ಅದರೆ, ಮಾಜಿ ಸಚಿವ ಬಿ.ಶ್ರೀರಾಮುಲು ಈಗಾಗಲೇ 2023 ವಿಧಾನಸಭಾ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಸತತ ಪರಾಭವಗೊಂಡಿದ್ದಾರೆ. ಇದಲ್ಲದೇ, ಪಂಥಾಹ್ವಾನ ಸ್ವೀಕರಿಸಿ ಮೂರನೇ ಬಾರಿಗೆ ಚುನಾವಣೆ ಎದುರಿಸಿ ಸೋತರೆ ನನ್ನ ರಾಜಕೀಯ ಭವಿಷ್ಯಕ್ಕೆ ಮಾರಕವಾಗಲಿದೆ ಎನ್ನಲಾಗಿದೆ. ಆದ್ದರಿಂದ, ರಾಮುಲು ರಕ್ಷಣಾತ್ಮಕವಾಗಿ ಎದುರಿಸಲು ಈಗಿನಿಂದಲೇ ಕ್ಷೇತ್ರ ಹುಡುಕಾಟದಲ್ಲಿ ನಿರತರಾಗಿರುವುದರಿಂದ ಸವಾಲು ಸ್ವೀಕರಿಸದೆ ಮೌನ ವಹಿಸಿ ರಾಜಕೀಯ ಜಾಣ್ಮೆ ಮೆರೆದಿದ್ದಾರೆ.
ಬಿಜೆಪಿ ನಾಯಕರ ಕ್ಷೇತ್ರ ಹುಡುಕಾಟ : ಮುಂಬರುವ ವಿಧಾನಸಭಾ ಚುನಾವಣೆಯೂ ಇನ್ನೂ ಒಂದೂವರೆ ವರ್ಷವಿದ್ದು, ಈಗಾಗಲೇ ಬಿಜೆಪಿ ನಾಯಕರು ಆಯಾ ಜಾತಿ ಹಾಗೂ ಸುಲಭವಾಗಿ ಗೆಲ್ಲುವ ಕ್ಷೇತ್ರಗಳ ಹುಡುಕಾಟದಲ್ಲಿದ್ದಾರೆ. ಮಾಜಿ ಸಚಿವ ಬಿ.ಶ್ರೀರಾಮುಲು ಜಿಲ್ಲೆಯ ಗ್ರಾಮೀಣ ಕ್ಷೇತ್ರ ಬಿಟ್ಟು ಕೂಡ್ಲಿಗಿ, ಮಸ್ಕಿ, ಮೊಳಕಾಲ್ಮೂರಯತ್ತ ಆಸಕ್ತಿ ವಹಿಸಿದ್ದಾರೆ. ಕಂಪ್ಲಿಯಲ್ಲಿ ಶಾಸಕ ಜೆ.ಎನ್.ಗಣೇಶ್ ಪ್ರಾಬಲ್ಯ ಹೆಚ್ಚುತ್ತಿರುವ ಹಿನ್ನಲೆ ರಾಮುಲು ಸೋದರ ಅಳಿಯ, ಮಾಜಿ ಶಾಸಕ ಜಿ.ಸುರೇಶ್‌ಬಾಬು ಮೊಳಕಾಲ್ಮೂರಿನಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಎರಡ್ಮೂರು ಬಾರಿ ಭೇಟಿ ನೀಡಿದ್ದು, ಆ ಕ್ಷೇತ್ರದ ಮಾಜಿ ಶಾಸಕ ಎನ್.ತಿಪ್ಪೇಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಅಕ್ರೋಶ ಹೊರಹಾಕಿದ್ದಾರೆ. ರಾಮುಲು ಸಹೋದರಿ, ಮಾಜಿ ಸಂಸದೆ ಜೆ.ಶಾಂತ ಜಿಲ್ಲೆಯಲ್ಲಿ ರೆಡ್ಡಿ ಬ್ರದರ್ಸ್ ಪ್ರಾಬಲ್ಯ ಕುಂದುತ್ತಿದ್ದಂತೆ ಆಂಧ್ರದತ್ತ ವಲಸೆ ಹೊರಟರು. ವೈಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿ 2024ರ ಲೋಕಸಭಾ ಚುನಾವಣೆಯಲ್ಲಿ ಹಿಂದೂಪುರದಿಂದ ಸ್ಪರ್ಧಿಸಿ ಪರಭಾವಗೊಂಡಿದ್ದು, ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ಹಠದಿಂದ ಜಿಲ್ಲೆಯ ಕಡೆ ಒಲವು ಬಿಟ್ಟಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ವಿರುದ್ಧ ಜನಾರ್ದನರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ಸ್ಪರ್ಧಿಸಿದ್ದರಿಂದ ಕಾಂಗ್ರೆಸ್ ವಶವಾಯಿತು. ಸದ್ಯ, ಮುಂದಿನ ಚುನಾವಣೆಯಲ್ಲಿ ಇಬ್ಬರು ಸ್ಪರ್ಧಿಸುವ ಆಸಕ್ತಿ ವಹಿಸಿದರೆ ಮತ್ತೋಬ್ಬರು ಕ್ಷೇತ್ರ ತೊರೆಯಬೇಕಿದೆ. ಒಂದು ವೇಳೆ ಬಿಜೆಪಿಯೂ ನಗರಕ್ಕೆ ಮಾಜಿ ಶಾಸಕ ಜಿ.ಸೋಮಶೇಖರೆಡ್ಡಿ ಅವಕಾಶ ನೀಡಿದರೆ ಮತ್ತೋಮ್ಮೆ ರೆಡ್ಡಿ ಗಂಗಾವತಿಯಲ್ಲಿ ಸ್ಪರ್ಧಿಸಬೇಕಿದೆ ಎನ್ನಲಾಗಿದೆ.
ಕಾಂಗ್ರೆಸ್ ಶಾಸಕರು ಸವಾಲು : ಜಿಲ್ಲೆಯ ಐವರು ಕಾಂಗ್ರೆಸ್ ಹಾಲಿ ಶಾಸಕರಲ್ಲಿ ನಗರ ಶಾಸಕ ನಾರಾ ಭರತರೆಡ್ಡಿ ಅಭಿವೃದ್ಧಿ ಕಾಮಗಾರಿಗಳ ಜತೆಗೆ ಸಲಾಂ ಬಳ್ಳಾರಿ ಅಭಿಯಾನ ಕೈಗೊಂಡು ಕ್ಷೇತ್ರದ ಜನರ ಸಂಪರ್ಕದಲ್ಲಿದ್ದಾರೆ. ಸಂಡೂರು ಶಾಸಕಿ ಅನ್ನಪೂರ್ಣ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಮೂಲಕ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಇನ್ನೂ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಸದಾ ಕಾಲ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಪರಿಹರಿಸುವುದರ ಜತೆಗೆ ಸಭೆಗಳಲ್ಲಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸುತ್ತಿದ್ದಾರೆ. ಇದಲ್ಲದೇ, ಕಂಪ್ಲಿ ಹಾಗೂ ಕುರುಗೋಡು ಭಾಗದ ಎಚ್‌ಎಲ್ ಹಾಗೂ ಎಲ್‌ಎಲ್ ಕಾಲುವೆಗಳ ನೀರಿನ ಸಮಸ್ಯೆಗೆ ಸೂಕ್ತ ಸ್ಪಂದಿಸುತ್ತಿರುವುದರಿಂದ ಜನರ ಮೆಚ್ಚಿನ ಶಾಸಕ ಎನಿಸಿಕೊಂಡಿದ್ದಾರೆ. ಶಾಸಕ ಬಿ.ನಾಗೇಂದ್ರಗೆ ಎರಡು ಬಾರಿ ಸಚಿವ ಸ್ಥಾನ ಸಿಕ್ಕರೂ ಪೂರ್ಣವಧಿ ಪೂರೈಸಲು ಆಗಲಿಲ್ಲ ಎಂಬ ಅನುಕಂಪದ ಅಲೆಯಿಂದ ಕ್ಷೇತ್ರದಲ್ಲಿ ಬಿಗಿ ಹಿಡಿತ ಸಾಧಿಸಿದ್ದಾರೆ. ಸದ್ಯದ ಮಟ್ಟಿಗೆ ಜಿಲ್ಲೆಯ ನಾಲ್ಕು ಕ್ಷೇತ್ರಗಳು ಕಾಂಗ್ರೆಸ್‌ನ ಹಿಡಿತದಲ್ಲಿವೆ ಎಂಬುದು ಜನರ ಅಭಿಪ್ರಾಯ. ಆದ್ದರಿಂದ, ಹೈಕಮಾಂಡ್ ಒಪ್ಪಿದರೆ ಚುನಾವಣೆಗೆ ಸಿದ್ಧ ಎಂದು ಜಿಲ್ಲೆಯ ಹಾಲಿ ಶಾಸಕರೊಬ್ಬರು ತಿಳಿಸಿದರು.