ಬಳ್ಳಾರಿ : ಜಿಲ್ಲೆಯಲ್ಲಿ ಎಗ್ಗಿಲ್ಲದೆ ಮಾದಕ ದ್ರವ್ಯಗಳ ಮಾರಾಟ ನಡೆಯುತ್ತಿದ್ದು, ಯುವಕರನ್ನು ಮಾದಕ ದ್ರವ್ಯದ ಹವ್ಯಾಸಕ್ಕೆ ತಳ್ಳಲಾಗುತ್ತಿದೆ ಎಂದು ಾಜಿ ಸಚಿವ ಬಿ. ಶ್ರೀರಾಮುಲು ಆರೋಪಿಸಿದರು.
ನಗರದ ಎಪಿಎಂಸಿ ಪ್ರಾಂಗಣದಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು. ನಗರ ಶಾಸಕ ಭರತ್‌ರೆಡ್ಡಿ ಶಾಸಕರ ಹಾಗೂ ಅಧಿಕಾರಿಗಳ ಮೇಲೆ ದರ್ಪ ತೋರುತ್ತಿರುವುದು ಕಣ್ಣು ಮುಂದಿದೆ. ಅವರಿಗೆ ಮುಂದಿನ ದಿನಗಳಲ್ಲಿ ತಕ್ಕ ಶಾಸ್ತಿ ಮಾಡುವುದಾಗಿ ಎಚ್ಚರಿಸಿದರು. ಈ ಬೃಹತ್ ಸಮಾವೇಶ ರಾಮುಲು ಅಥವಾ ಜನಾರ್ದನ ರೆಡ್ಡಿ ರಕ್ಷಣೆಗಲ್ಲ, ಬದಲಾಗಿ ಇಡೀ ಕಲ್ಯಾಣ ಕರ್ನಾಟಕವನ್ನು ರಕ್ಷಿಸುವ ಸಲುವಾಗಿ ಆಯೋಜಿಸಿದೆ ಎಂದರು.
ಬ್ಯಾನರ್ ಕಟ್ಟುವ ವಿಚಾರದಲ್ಲಿ ಅನಗತ್ಯ ಜಗಳ ತೆಗೆದು ಶಾಸಕ ಜಿ.ಜನಾರ್ದನ ರೆಡ್ಡಿ ಅವರನ್ನು ಮುಗಿಸಲು ಸಂಚು ರೂಪಿಸಿದ್ದೀರಿ. ನಮ್ಮಿಂದ ಗುಂಡು ಹಾರಿದ್ದರೆ ನಾವು ನೇರವಾಗಿ ಜಾಮೀನು ಪಡೆಯದೆ ಬಂಧನಗೊಳ್ಳುತ್ತಿದ್ದೆ. ಮೃತರ ಕುಟುಂಬಕ್ಕೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ 10 ಲಕ್ಷ ರೂ. ಚೆಕ್ ನೀಡಿ ಮಾನವೀಯತೆ ಮೆರೆದು ಈ ಪ್ರಕರಣದ ಆರೋಪಿಗಳನ್ನು ತಕ್ಕ ಶಿಕ್ಷೆ ನೀಡಿ ನ್ಯಾಯ ದೊರಕಿಸುವ ಭರವಸೆ ನೀಡಲಾಗಿದೆ. ಗಂಭೀರ ಆರೋಪಿಸಿದರು.
ಡಿ.ಕೆ.ಶಿವಕುಮಾರ ಅವರೇ ಡಿಸಿಎಂ ಸ್ಥಾನ ಸಾಂವಿಧಾನಿಕ ಹುದ್ದೆಯೇ? ಅಧಿಕಾರಿಗಳ ಜತೆ ಸಭೆ ನಡೆಸಿ ಪಕ್ಷದ ಶಾಸಕನನ್ನು ರಕ್ಷಿಸಲು ಮುಂದಾಗಿದ್ದೀರಿ. ನಿಮ್ಮ ಇಲಾಖೆಯನ್ನೇ ನಿಮಗೆ ನಿರ್ವಹಿಸಲು ಗೊತ್ತಿಲ್ಲ. ಪೊಲೀಸ್ ಅಧಿಕಾರಿಗಳಾದ ಎಎಸ್ಪಿ ಕೆ.ಪಿ.ರವಿಕುಮಾರ, ಡಿವೈಎಸ್ಪಿ ಚಂದ್ರಕಾಂತ್ ನಂದಾರೆಡ್ಡಿ ನೀವು ಇಬ್ಬರು ವೃತ್ತಿಯಿಂದ ನಿವೃತ್ತಿಯಾದರೂ ನೀವು ನನ್ನ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
2028ರಲ್ಲಿ ತಾನು ಫಿನಿಕ್ಸ್‌ಪಕ್ಷಿಯಂತೆ ಎದ್ದು ಬರುವೆ. ಕೂಡಲೇ ಶಾಸಕ ಭರತ್‌ರೆಡ್ಡಿ, ಅಪ್ತ ಸತೀಶ್‌ರೆಡ್ಡಿ ಇತರೆ ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ಸಿಬಿಐ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಶಾಸಕ ಜಿ.ಜನಾರ್ದನರೆಡ್ಡಿ ಮಾತನಾಡಿ, ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಕ್ರಿಮಿನಲ್‌ಗಳು ನನ್ನನ್ನು ನಾಲ್ಕು ವರ್ಷ ಜೈಲಿನಲ್ಲಿಟ್ಟರೂ ಮುಗಿಸಲು ಸಾಧ್ಯವಾಗಲಿಲ್ಲ. ಇದೀಗ ಕಾಂಗ್ರೆಸ್ ಶಾಸಕರಿಂದಲೇ ದಾಳಿಗೆ ಯತ್ನಿಸಿದ್ದಾರೆ ಎಂದು ಗುಡುಗಿದರು.
ಶಾಸಕ ಭರತ್‌ರೆಡ್ಡಿ ಅವರೊಂದಿಗೆ ಎಎಸ್ಪಿ ರವಿಕುಮಾರ್, ಡಿವೈಎಸ್ಪಿ ಚಂದ್ರಕಾಂತ್ ನಂದಾರೆಡ್ಡಿ ಸೇರಿಕೊಂಡು ನನ್ನ ಮನೆಯ ಮೇಲೆ ದಾಳಿ ನಡೆಸಲು ಪ್ರಚೋದನೆ ನೀಡಿದ್ದಾರೆ. ಈ ಅಧಿಕಾರಿಗಳು ಮತ್ತು ಶಾಸಕರು ಸೇರಿ ಜಿಲ್ಲೆಯನ್ನು ಅನೈತಿಕ ಚಟುವಟಿಕೆಗಳ ಫ್ಯಾಕ್ಟರಿ ಮಾಡಲು ಹೊರಟಿದ್ದಾರೆ ಎಂಬುದಾಗಿ ಆರೋಪಿಸಿದರು. ಈ ಇಬ್ಬರೂ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಒಂದು ಬ್ಯಾನರ್ ಗಲಾಟೆ ಪ್ರಕರಣವನ್ನು ಸಿಬಿಐಗೆ ವಹಿಸದೆ , ಶಾಸಕರನ್ನು ಬಂಧಿಸದಿದ್ದರೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಮುಂಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕದಾದ್ಯಂತ ಪ್ರವಾಸ ಮಾಡಿ ಬಿಜೆಪಿ ಶಾಸಕರನ್ನು ಗೆಲ್ಲಿಸುವುದಾಗಿ ಶಪಥ ಮಾಡಿದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಶಾಸಕ ಜಿ.ಜನಾರ್ದನ ರೆಡ್ಡಿ ಅವರು ಮರಳಿ ಬಿಜೆಪಿಗೆ ಸೇರಿದ್ದರಿಂದ ಕಾಂಗ್ರೆಸ್ ನಾಯಕರ ಕುರ್ಚಿ ಅಲಗಾಡುತ್ತಿದೆ. ಜನಾರ್ದರೆಡ್ಡಿಯ ವೇಗ ಮತ್ತು ಬಿ.ಶ್ರೀರಾಮುಲು ಅವರ ಬಿರುಗಾಳಿ ಕಂಡು ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲಿ ಭಯ ಹುಟ್ಟಿದೆ ಎಂದು ಲೇವಡಿ ಮಾಡಿದರು.
ಬಳ್ಳಾರಿಯ ಮೈನಿಂಗ್ ಮಾಫಿಯಾ ಮಾಡಿದ್ದೇ ಕಾಂಗ್ರೆಸ್. ಆದರೆ, ಆ ಆರೋಪವನ್ನು ರೆಡ್ಡಿ ಮೇಲೆ ಹೊರಿಸಲಾಯಿತು. ಜನಾರ್ದನ ರೆಡ್ಡಿಯವರನ್ನು ರಾಜಕೀಯವಾಗಿ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ, ಶಾಸಕ ಭರತ್‌ರೆಡ್ಡಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ವಿಪ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಕೊಲೆ, ಸುಲಿಗೆ, ದರೋಡೆ ಮತ್ತು ಅತ್ಯಾಚಾರಗಳ ಮೂಲಕ ಅಟ್ಟಹಾಸ ಮೆರೆಯುತ್ತಿದ್ದು, ಸಂಪೂರ್ಣವಾಗಿ ಗೂಂಡಾ ರಾಜಕಾರಣದಲ್ಲಿ ತೊಡಗಿದೆ ಎಂದರು.
ಜನಾರ್ದನರೆಡ್ಡಿ ಸಹೋದರ ಜಿ. ಸೋಮಶೇಖರರೆಡ್ಡಿ ನಡುವಿನ ಆಂತರಿಕ ಜಗಳದಿಂದ ಹುಟ್ಟಿದ ಕೂಸು ಈಗ ನಿಮ್ಮ ಮೇಲೆಯೇ ಸವಾರಿ ಮಾಡಲು ಹೊರಟಿದೆ. ಒಗ್ಗೂಟ್ಟಿನಿಂದ ಮುಂಬರುವ ಚುನಾವಣೆ ಎದುರಿಸಿ ಎಂದು ಕಿವಿಮಾತು ಹೇಳಿದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ನಗರದಲ್ಲಿ ನಡೆದಿರುವ ಹತ್ಯೆಯು ಈ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿಯಾಗಿದೆ. ಇದು ಸುಪಾರಿ ಕೊಲೆಗಾರರ ಮೂಲಕ ನಡೆದ ಯೋಜಿತ ಕೃತ್ಯವಾಗಿದೆ. ಕುರ್ಚಿ ಅಥವಾ ಅಧಿಕಾರ ಯಾವುದೂ ಶಾಶ್ವತವಲ್ಲ, ನೀವು ಆಡಳಿತವನ್ನು ಹೇಗೆ ನಡೆಸುತ್ತೀರಿ ಎಂಬುದು ಮುಖ್ಯವಾಗುತ್ತದೆ ಎಂದು ಸಿಎಂಗೆ ಟಾಂಗ್ ನೀಡಿದರು.
ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಮಾತನಾಡಿ, ಭರತರೆಡ್ಡಿ ನಿನ್ನ ವಯಸ್ಸು ಚಿಕ್ಕದು. ಆದರೆ, ನಿನ್ನ ತಲೆಯಲ್ಲಿ ಕ್ರಿಮಿನಲ್ ಬುದ್ಧಿಯಿದೆ. ಜಿಲ್ಲೆಯಲ್ಲಿ 2028ರಲ್ಲಿ ಬಿಜೆಪಿ ಬಾವುಟ ಹಾರಬೇಕು. ರಾಜ್ಯದ ಗೊಂಡಾ ಶಾಸಕರನ್ನು ಕಿತ್ತು ಒಗೆಯಬೇಕು ಎಂದರು.
ಬಾಕ್ಸ್ : ಪ್ರತಿಭಟನಾ ಸಮಾವೇಶ ನಿಮಿತ್ತ 1,114 ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಿ ಬಂದೋಬಸ್ತ್ ವಹಿಸಲಾಗಿತ್ತು. ನಗರಾದ್ಯಂತ ಮುನ್ನ ಎಚ್ಚರಿಕೆಯಾಗಿ ಮದ್ಯ ನಿಷೇಧಿಸಲಾಗಿತ್ತು. ಸಮಾವೇಶಕ್ಕೂ ಮುನ್ನ ಬಿಜೆಪಿ ರಾಜ್ಯ ನಾಯಕರು ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ವೇದಿಕೆಯವರೆಗೆ ತೆರೆದ ವಾಹನದ ಮೂಲಕ ತೆರಳಲು ಉದ್ದೇಶಿಸಿದ್ದರು. ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ಮೆರವಣಿಗೆ ರದ್ದುಗೊಂಡಿತು. ಸಮಾವೇಶಕ್ಕೆ ಹತ್ತಕ್ಕೂ ಅಧಿಕ ಜನರಿದ್ದರು. ಬೆಳಗ್ಗೆ ಹತ್ತು ಗಂಟೆಗೆ ನಿಗದಿಯಾದ ಕಾರ್ಯಕ್ರಮ ಮಧ್ಯಾಹ್ನ 12.30 ಆರಂಭಗೊಂಡಿದ್ದರಿಂದ ಜನರು ಕಾದು ಕಾದು ಸುಸ್ತಾದರು. ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಸಮಾವೇಶ ನಡೆಸುವುದಾಗಿ ತಿಳಿಸಿದ್ದರು. ಆದರೆ, ಜೆಡಿಎಸ್ ರಾಜ್ಯ ನಾಯಕರು ಭಾಗವಹಿಸದೆ ಇದ್ದರಿಂದ ಇಲ್ಲಿನ ಸ್ಥಳೀಯ ಕಾರ್ಯಕರ್ತರು ವೇದಿಕೆಯಲ್ಲಿ ಕಾಣಲಿಲ್ಲ. ಶ್ರೀರಾಮುಲು, ರೆಡ್ಡಿ ಭಾಷಣದ ವೇಳೆ ಕೇಕೆ ಹಾಕಿ ನಾಯಕರನ್ನು ಹುರಿದುಂಬಿಸಿದರು. ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನ ಹಿನ್ನೆಲೆ ಅಂತ್ಯಕ್ರಿಯೆಗೆ ತೆರಳುವ ಉದ್ದೇಶದಿಂದ ಕೆಲ ನಾಯಕರು ಭಾಷಣ ಮುಗಿಸಿ ಮಧ್ಯೆದಲ್ಲಿ ತೆರೆಳಿದರು.