ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಒಂಬತ್ತು ತಾತ್ಕಾಲಿಕ ಉಂಡಿಗಳಿಗೆ ಭಾನುವಾರ ವಂಶಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್ ಪೂಜೆ ಸಲ್ಲಿಸಿದರು. ದೇವಸ್ಥಾನದ ಇಒ ಮಲ್ಲಪ್ಪ, ಪ್ರಧಾನ ಅರ್ಚಕ ಪ್ರಮೋದ್ ಭಟ್ ಹಾಗೂ ಇತರರಿದ್ದರು.
- ಮೈಲಾರಲಿಂಗೇಶ್ವರ
- ಸ್ವಾಮಿಗೆ
- ವಿಶೇಷ
ಹೂವಿನಹಡಗಲಿ: ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಭಾನುವಾರ ಭಾರತ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಹುಣ್ಣಿಮೆಯಾದ ನಾಲ್ಕನೇ ದಿನ ಕಾರ್ಣಿಕೋತ್ಸವ ಜರುಗಲಿದ್ದು, ಕಾರ್ಣಿಕದ ಗೊರವಯ್ಯ ಬಿಲ್ಲನ್ನೇರಿ ಭವಿಷ್ಯ ನುಡಿಯಲಿದ್ದಾರೆ.
ಹುಣ್ಣಿಮೆ ನಿಮಿತ್ತ ಭಾನುವಾರ ದೂರದ ಊರುಗಳಿಂದ ಆಗಮಿಸಿದ ಭಕ್ತರು ಮೀಸಲು ಬುತ್ತಿ ತಂದು ದೇವಸ್ಥಾನದ ಆವರಣದಲ್ಲಿ ದೋಣಿಗಳಿಗೆ ಸಮರ್ಪಿಸಿದರು. ಬೆಳಗ್ಗೆ ಸ್ವಾಮಿಗೆ ವಿಶೇಷ ಪೂಜೆಗಳು ಜರುಗಿದವು. ಹರಕೆ ಹೊತ್ತ ಭಕ್ತರು ದೀರ್ಘದಂಡ ನಮಸ್ಕಾರ, ಕುದುರೆಕಾಕರು ಮತ್ತು ಗೊರವಮ್ಮರು ಚೌರಿ ಹಾಗೂ ಭಕ್ತರು ದೀವಿಟಿಗೆ ಸೇವೆ ಸಲ್ಲಿಸಿದರು.
ಕಾರ್ಣಿಕೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಎತ್ತಿನ ಬಂಡಿ, ಟ್ರ್ಯಾಕ್ಟರ್‌ಗಳಲ್ಲಿ ಆಗಮಿಸಿ ಮುಂಚಿತವಾಗಿಯೇ ಕ್ಷೇತ್ರದಲ್ಲಿ ಬಿಡಾರಗಳನ್ನು ಹೂಡಿ ನಿತ್ಯ ಸ್ವಾಮಿಯ ಸೇವೆ ಸಲ್ಲಿಸಲು ಆರಂಭಿಸಿದ್ದಾರೆ.
ಜಾತ್ರೋತ್ಸವದ ಅಂಗವಾಗಿ ಭಾನುವಾರ ಬೆಳಗ್ಗೆ ದೇವಸ್ಥಾನದ ಆವರಣದಲ್ಲಿ ಒಂಬತ್ತು ತಾತ್ಕಾಲಿಕ ಉಂಡಿಗಳನ್ನು ಅಳವಡಿಸಲಾಯಿತು. ಈ ವೇಳೆ ವಂಶಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್ ಪೂಜೆ ಸಲ್ಲಿಸಿದರು. ವರ್ಷದ ಎಲ್ಲ ಹುಣ್ಣಿಮೆಗಳಿಗಿಂತ ಕ್ಷೇತ್ರದಲ್ಲಿ ಭಾರತ ಹುಣ್ಣಿಮೆ ಆಚರಿಸಿದರೆ ಇಷ್ಟಾರ್ಥ ಸಿದ್ಧಿಸುತ್ತವೆ ಎಂಬ ನಂಬಿಕೆ ಇದೆ.
ಕಳೆದ ಭಾನುವಾರ ರಥ ಸಪ್ತಮಿ ದಿನದಿಂದ 11 ದಿನಗಳ ಕಾಲ ಕ್ಷೇತ್ರದ ಡೆಂಕನ ಮರಡಿಯಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ಮಣಿಕಾಸುರ-ಮಲ್ಲಾಸುರೊಂದಿಗೆ ಯುದ್ಧ ಮಾಡುತ್ತಾನೆ ಎಂಬ ಪ್ರತೀತಿ ಇದ್ದು, ಆ ನಂಬಿಕೆಯಂತೆ ಸ್ವಾಮಿಯು ದೇವಸ್ಥಾನದಲ್ಲಿ ಇರುವುದಿಲ್ಲ. ಈ ಕಾರಣಕ್ಕಾಗಿ ದೇವಾಲಯದಲ್ಲಿ ಗಂಟೆನಾದ, ಮಂಗಳಾರತಿ, ನೈವೇದ್ಯಗಳು ಜರುಗುವುದಿಲ್ಲ. ದೇವಸ್ಥಾನದ ಗಂಟೆಗಳನ್ನು ಹಗ್ಗದಿಂದ ಕಟ್ಟಿಹಾಕಲಾಗುತ್ತದೆ. ಸುಕ್ಷೇತ್ರಕ್ಕೆ ಬರುವ ಭಕ್ತರಿಗಾಗಿ ಸಾರಿಗೆ ಇಲಾಖೆಯಿಂದ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ದೇವಸ್ಥಾನದ ಇಒ ಮಲ್ಲಪ್ಪ, ಪ್ರಧಾನ ಅರ್ಚಕ ಪ್ರಮೋದ್ ಭಟ್ ಹಾಗೂ ಇತರರು ಉಪಸ್ಥಿತರಿದ್ದರು.