ಬೆಣ್ಣಿಕಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭವನ್ನು ಶಾಸಕ ನೇಮಿರಾಜ್ ನಾಯ್ಕ ಶನಿವಾರ ಉದ್ಘಾಟಿಸಿದರು. ಮರಿಶಾಂತವೀರ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಶಾಲಾ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಕೆ.ಕೊಟ್ರೇಶಪ್ಪ ಮತ್ತಿತರರು ಇದ್ದರು.
ಹಗರಿಬೊಮ್ಮನಹಳ್ಳಿ: ಗ್ರಾಮೀಣ ಸರ್ಕಾರಿ ಶಾಲೆ ಶತಮಾನೋತ್ಸವ ಆಚರಿಸುತ್ತಿರುವುದು ಜ್ಞಾನವೃದ್ಧಿ, ಸಂಸ್ಕಾರ ಹಾಗೂ ಸಂಸ್ಕೃತಿಯ ಗಟ್ಟಿಯಾದ ಹಿನ್ನೆಲೆ ಈ ಪ್ರದೇಶಕ್ಕಿದೆ ಎಂಬುದು ಸಾಕ್ಷೀಕರಿಸುತ್ತದೆ ಎಂದು ಶಾಸಕ ಕೆ. ನೇಮಿರಾಜ್ ನಾಯ್ಕ ಹೇಳಿದರು.
ಬೆಣ್ಣಿಕಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಶಾಲೆಯನ್ನು ಮೇಲ್ದರ್ಜೆಗೇರಿಸಲು ಹಾಗೂ ಎಲ್.ಕೆ.ಜಿ.ಯಿಂದ ಪಿಯುಸಿವರೆಗೂ ಶಿಕ್ಷಣ ನೀಡುವ ನಿಟ್ಟಿನಲ್ಲಿ ಎರಡು ಎಕರೆ ಜಮೀನನ್ನು ಕೆಪಿಎಸ್ ಶಾಲೆಗಾಗಿ ಕಾಯ್ದಿರಿಸಲಾಗಿದೆ. ಇದರ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಗಮನ ಸೆಳೆಯಲು ಪ್ರಸ್ತಾವನೆ ಸಲ್ಲಿಸಲಾಗುವುದು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಈಗಾಗಲೇ ಕೆಪಿಎಸ್ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಹಲವು ಗ್ರಾಮಗಳಲ್ಲಿ ವಿಸ್ತರಿಸಲಾಗುವುದು ಎಂದರು.
ಕಡ್ಲಬಾಳು ಶಾಖಾ ಗವಿ ಮಠದ ಮರಿ ಶಾಂತವೀರ ಸ್ವಾಮೀಜಿ ಮತ್ತು ಹಂಪಸಾಗರ ನವಲಿ ಹಿರೇಮಠದ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿ, ಯುವ ಸಮೂಹ ದುಶ್ಚಟಗಳಿಂದ ದೂರವಿರಬೇಕು. ಶತಮಾನ ಕಂಡ ಶಾಲೆಯನ್ನು ಹೊಂದಿರುವ ಈ ಗ್ರಾಮವು ಇಡೀ ತಾಲೂಕಿಗೆ ಮಾದರಿಯಾಗಲಿ ಎಂದು ಹಾರೈಸಿದರು.
ಬಿಇಒ ಎಂ.ಎಸ್.ಪ್ರಭಾಕರ, ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ, ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮವ್ವ ಹೇಮಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಗುರುಬಸವರಾಜ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ, ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಪ್ರಮುಖರಾದ ಕನ್ನಿಹಳ್ಳಿ ಚಂದ್ರಶೇಖರ್, ಸಿ.ಎಚ್.ಸಿದ್ಧರಾಜ್, ಎನ್.ಬಸವರಾಜ್, ತಾಪಂ ಮಾಜಿ ಸದಸ್ಯ ಬೆಣಕಲ್ ಪ್ರಕಾಶ್, ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ಲೋಕೇಶ್, ಮುಖ್ಯ ಶಿಕ್ಷಕ ಕೆ.ಹುಸೇನ್ ಸಾಬ್ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಶಾರದಾ ಮಾತೆ ಭಾವಚಿತ್ರ ಹೊತ್ತ ಸಾರೋಟನ್ನು ವಿವಿಧ ವಾದ್ಯಮೇಳ ಹಾಗೂ ಮಹಿಳೆಯರ ಪೂರ್ಣಕುಂಭಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಶಾಲಾ ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ಕೆ.ಕೊಟ್ರೇಶಪ್ಪ ಪ್ರಾಸ್ತಾವಿಕ ಮಾತನಾಡಿದರು. ಸಂಗೀತ ಶಿಕ್ಷಕಿ ಶಾರದಾ ಮಂಜುನಾಥ್ ಮತ್ತು ಸಂಗಡಿಗರು ಪ್ರಾರ್ಥಿಸಿದರು.