ಕಂಪ್ಲಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಯಂತ್ರದ ಕಾರ್ಯನಿರ್ವಹಣೆಗೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು.
ಕಂಪ್ಲಿ: ಪಟ್ಟಣದಲ್ಲಿಯೇ ಡಯಾಲಿಸಿಸ್ ಕೇಂದ್ರ ಆರಂಭಗೊಂಡಿರುವುದರಿಂದ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಕೇಂದ್ರಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಡಯಾಲಿಸಿಸ್ ಕೇಂದ್ರ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ವರದಾನವಾಗಿದೆ. ರೋಗಿಗಳು ಡಯಾಲಿಸಿಸ್‌ಗಾಗಿ ಬೇರೆಡೆ ತೆರಳುತ್ತಿದ್ದರು. ಇದರಿಂದ ಸಮಯ, ಹಣ ವೆಚ್ಚವಾಗುವುದರೊಂದಿಗೆ ಆರೋಗ್ಯಕ್ಕೆ ತ್ರಾಸದಾಯಕವಾಗಿತ್ತು ಎಂದರು.
ಆಡಳಿತ ವೈದ್ಯಾಧಿಕಾರಿ ರವೀಂದ್ರ ಕನಕೇರಿ ಮಾತನಾಡಿ, ಇದು ತಾಲೂಕಿನಲ್ಲಿಯೇ ಮೊದಲ ಡಯಾಲಿಸಿಸ್ ಕೇಂದ್ರವಾಗಿದೆ. ಮೂತ್ರಪಿಂಡಗಳು ಸರಿಯಾಗಿ ಕೆಲಸ ಮಾಡದಿದ್ದಾಗ ರಕ್ತದಿಂದ ಹೆಚ್ಚುವರಿ ದ್ರವ ಮತ್ತು ತ್ಯಾಜ್ಯವನ್ನು ತೆಗೆದುಹಾಕುವ ಚಿಕಿತ್ಸೆ ಡಯಾಲಿಸಿಸ್ ಆಗಿದೆ. ಸದ್ಯ ಇಲ್ಲಿ ಎರಡು ಡಯಾಲಿಸಿಸ್ ಯಂತ್ರಗಳಿದ್ದು, ದಿನಕ್ಕೆ ಒಂದು ಯಂತ್ರದಿಂದ ಮೂವರನ್ನು ಡಯಾಲಿಸಿಸ್ ಮಾಡಲು ಸಾಧ್ಯ. ಇದು ಉಚಿತ ಸೇವೆಯಾಗಿರುತ್ತದೆ ಎಂದರು.
ಡಾ.ಮಲ್ಲೇಶಪ್ಪ, ಡಾ.ಹಾರಿಕಾ, ಕಚೇರಿ ಅಧೀಕ್ಷಕ ಪ್ರಸಾದ್, ಸಿಬ್ಬಂದಿ ಚನ್ನಬಸವರಾಜ, ಶಿವರುದ್ರಪ್ಪ, ಮಹಾಂತೇಶ ಇದ್ದರು.