ಬಳ್ಳಾರಿ ಪ್ರವಾಸಿ ಕೆರೆಯ ನೋಟ.
ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣ ಬಳಿಯಿರುವ ಪ್ರವಾಸಿ ಕೆರೆ ದುಸ್ಥಿತಿಯಲ್ಲಿದೆ. ಸೌಂದರ್ಯೀಕರಣದ ಹೆಸರಿನಲ್ಲಿ ನಡೆದ ಕಾಮಗಾರಿಗಳು ಅಪೂರ್ಣಗೊಂಡಿವೆ. ಉದ್ಘಾಟನೆಗೊಂಡು ಎರಡು ವರ್ಷ ಕಳೆಯುವ ಮುನ್ನವೇ ಕೆರೆ ಹಾಳಾಗಿದೆ.
ಹದಿಮೂರು ಎಕರೆ ವಿಸ್ತೀರ್ಣದಲ್ಲಿರುವ ಕೆರೆಯಲ್ಲಿ ಜಾಲಿ ಬೇಲಿ ಬೆಳೆದಿದ್ದು, ಕುಡುಕರ ಅಡ್ಡೆಯಾಗಿತ್ತು. ಕಸದ ರಾಶಿ ತುಂಬಿದ್ದ ಪ್ರದೇಶವನ್ನು ಕಳೆದ ಮೂರು ವರ್ಷಗಳ ಹಿಂದೆ ಜಿಲ್ಲಾ ಖನಿಜ ಪ್ರತಿಷ್ಠಾನದ (ಡಿಎಂಎಫ್) 1.85 ಕೋಟಿ ರೂ. ವೆಚ್ಚದಲ್ಲಿ ನಿರ್ಮಿತಿ ಕೇಂದ್ರದಿಂದ ಅಭಿಪಡಿಸಲಾಗಿತ್ತು.
ಸದ್ಯ ಕೆರೆಯ ಸುತ್ತ ಸಂಚರಿಸಿದರೆ ಅಭಿವೃದ್ಧಿ ಬದಲು ಅವ್ಯವಸ್ಥೆಯೇ ಎದ್ದು ಕಾಣುತ್ತಿದೆ. ಕೆರೆಯ ಸೌಂದರ್ಯ ಹೆಚ್ಚಿಸಬೇಕಿದ್ದ ಲೈಟಿಂಗ್ ವ್ಯವಸ್ಥೆ ಹಾಗೂ ಹಸಿವು ನೀಗಿಸಬೇಕಿದ್ದ ಫುಡ್ ಕೋರ್ಟ್ ನಿರ್ಮಾಣ ಹಂತದಲ್ಲಿರುವಾಗಲೇ ಹಾಳಾಗಿವೆ. ವಾಯು ವಿಹಾರಕ್ಕೆಂದು ನಿರ್ಮಿಸಲಾದ ಪಾದಚಾರಿ ರಸ್ತೆಗಳು ಅಲ್ಲಲ್ಲಿ ಕುಸಿದಿದ್ದು, ಬೇಲಿ ಬೆಳೆದು ರಸ್ತೆಯ ತುಂಬೆಲ್ಲ ಕಸ ಹರಡಿರುವುದಿಂದ ಸಂಚರಿಸಲು ಅಪಾಯಕಾರಿಯಾಗಿವೆ.
ಕೆರೆಯ ಸುತ್ತಲೂ ಹಸಿರಿನಿಂದ ಕಂಗೊಳಿಸಬೇಕಿದ್ದ ಉದ್ಯಾನ ನಿರ್ವಹಣೆಯಿಲ್ಲದೆ ಒಣಗಿದ್ದು, ಕಳೆ ಗಿಡಗಳ ತಾಣವಾಗಿದೆ. ಕೆರೆ ಉದ್ಘಾಟನೆಯಾದ ವೇಳೆ ಪ್ರವಾಸಿಗರ ಹೆಚ್ಚಳಕ್ಕಾಗಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ದಿನೇದಿನೆ ಕೆರೆ ವೀಕ್ಷಣೆಗೆ ಬರುವ ಜನರ ಸಂಖ್ಯೆ ತಗ್ಗುತ್ತಿದ್ದಂತೆ ನೀರಿನಲ್ಲಿಯೇ ಬೋಟ್ ಕೆಟ್ಟು ತುಕ್ಕು ಹಿಡಿಯುತ್ತಿದೆ.
ಕಳೆದ ಎರಡು-ಮೂರು ವರ್ಷಗಳಿಂದ ಕೆರೆಯ ನೀರು ಹೊರ ಹರಿಸಿಲ್ಲ. ಕೆರೆ ನೀರು ಶುದ್ಧೀಕರಿಸದ ಕಾರಣ ಕೆರೆಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದರಿಂದ ದುರ್ನಾತ ಬೀರುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸುತ್ತಮುತ್ತಲಿನ ಪರಿಸರ ಅಶುಚಿತ್ವದ ಕೇಂದ್ರವಾಗಿ ಮಾರ್ಪಟ್ಟಿದೆ.
ಬಳ್ಳಾರಿ ಜಿಲ್ಲಾಡಳಿತದ ವೈಫಲ್ಯ?
ಯೋಜನೆ ಪ್ರಕಾರ ಪ್ರವೇಶದ್ವಾರ, ಆಸನಗಳು, ರಕ್ಷಣಾ ಗೋಡೆ, ಲ್ಯಾಂಡ್ ಸ್ಕೇಪಿಂಗ್, ಸಿಸಿ ಕ್ಯಾಮರಾ ಹಾಗೂ ವಿದ್ಯುತ್ ದೀಪಗಳನ್ನು ಅಳವಡಿಸಬೇಕಿತ್ತು. ಆದರೆ, ಯಾವುದೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಬಳ್ಳಾರಿ ಜನತೆ ಸಂಜೆ ಕಾಲ ಕಳೆಯಲು ಉತ್ತಮ ಜಾಗವಿಲ್ಲದೆ ಪರದಾಡುವಂತಾಗಿದೆ. ನಗರದಲ್ಲಿರುವ ಒಂದೇ ಒಂದು ಪ್ರವಾಸಿ ಕೆರೆಯನ್ನು ಕಾಪಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ. ಕೋಟ್ಯಂತರ ರೂಪಾಯಿ ತೆರಿಗೆ ಹಣ ವ್ಯರ್ಥವಾಗುತ್ತಿದೆ. ಕೂಡಲೆ ಕೆರೆ ಹೂಳೆತ್ತಿ, ಶುದ್ಧ ನೀರು ತುಂಬಿಸಿ, ಸ್ಥಗಿತಗೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಪುನೀತ್ ರಾಜಕುಮಾರ್ ಅಭಿಮಾನಿಗಳಿಗೂ ಬೇಸರ
ಸದ್ಯ ಪ್ರವಾಸಿ ಕೆರೆಯ ಸುತ್ತಲೂ ಹಾಕಿ, ಬ್ಯಾಡ್ಮಿಂಟನ್ ಕೋರ್ಟ್, ಜಿಲ್ಲಾ ಕ್ರೀಡಾಂಗಣ, ವಿಜ್ಞಾನ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಾಲ್ಮೀಕಿ ಭವನವಿದೆ. ಸಾರ್ವಜನಿಕರು ಕ್ರೀಡಾಂಗಣದಲ್ಲಿ ವಾಕಿಂಗ್, ವಾಲ್ಮೀಕಿ ಭವನದಲ್ಲಿ ಕಾರ್ಯಕ್ರಮ, ವಿಜ್ಞಾನ ಕೇಂದ್ರಕ್ಕೆ ವಿದ್ಯಾರ್ಥಿಗಳು ಭೇಟಿ ನೀಡುತ್ತಾರೆ. ಸಮೀಪದಲ್ಲಿರುವ ಕೆರೆ ವೀಕ್ಷಣೆಗೆ ತೆರಳಲು ಅಲ್ಲಿನ ಅವ್ಯವಸ್ಥೆಯೇ ಅಡ್ಡಿಯಾಗಿದೆ. ಕೆರೆ ಬಳಿಯೇ ಕರ್ನಾಟಕ ರತ್ನ ದಿ.ಪುನೀತ್ ರಾಜಕುಮಾರ್ ಪ್ರತಿಮೆ ಅನಾವರಣಗೊಳಿಸಿದ್ದು, ವೀಕ್ಷಣೆಗೆ ಬರುವವರಿಗೆ ಕೆರೆಯ ದುಸ್ಥಿತಿ ಬೇಸರ ಮೂಡಿಸುತ್ತಿದೆ.
ಪ್ರವಾಸಿ ಕೆರೆ ಹಾಳಾಗಿರುವುದು ಗಮನಕ್ಕೆಯಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ವಚ್ಛತೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸ್ಥಳೀಯ ಅನುದಾನದಡಿ ಅಭಿವೃದ್ಧಿ ಪಡಿಸಿ ಸಾರ್ವಜನಿಕರ ವೀಕ್ಷಣೆಗೆ ಅನುಕೂಲ ಮಾಡಿಕೊಡಲಾಗುವುದು.