- ಸ್ವಯಂಪ್ರೇರಿತ ಬಳ್ಳಾರಿ ಬಂದ್
- ಭೂಸ್ವಾಧೀನ ಪ್ರಕ್ರಿಯೆಯು ದೊಡ್ಡ ಹಗರಣ
ಬಳ್ಳಾರಿ : ಕುಡತಿನಿ ಪ್ರದೇಶದ ಭೂ ಸಂತ್ರಸ್ತ ರೈತರಿಗೆ ನ್ಯಾಯಯುತ ಪರಿಹಾರಕ್ಕೆ ಆಗ್ರಹಿಸಿ, ಜೂ.18ರಂದು ಬಳ್ಳಾರಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು.ಬಸವರಾಜ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಹಿನ್ನೆಲೆಯಲ್ಲಿ ರೈತ, ಕಾರ್ಮಿಕ, ಕನ್ನಡಪರ ಸಂಘಟನೆಗಳು ಸೇರಿದಂತೆ ಇಪ್ಪತ್ತಕ್ಕೂ ಅಧಿಕ ನಾನಾ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಸ್ವಯಂಪ್ರೇರಿತ ಬಳ್ಳಾರಿ ಬಂದ್‌ಗೆ ಬೆಂಬಲ ನೀಡುವುದಾಗಿ ತಿಳಿಸಿವೆ. ಬಂದ್‌ಗೆ ಜಿಲ್ಲೆಯ ವ್ಯಾಪಾರಸ್ಥರು, ಅಂಗಡಿ ಮಾಲೀಕರು, ವಾಣಿಜ್ಯ ಸಂಸ್ಥೆಗಳು, ಚೇಂಬರ್ ಆಫ್ ಕಾಮರ್ಸ್, ಶಾಲಾ-ಕಾಲೇಜುಗಳು, ಚಿತ್ರಮಂದಿರಗಳು ಸೇರಿದಂತೆ ಎಲ್ಲ ವಲಯದ ಜನರು ಸಹಕರಿಸಬೇಕು. ಈ ಬಂದ್‌ನಲ್ಲಿ ಸುಮಾರು ಎರಡು ಸಾವಿರದಿಂದ ಮೂರು ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದಸರು.
ರಾಜ್ಯದ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭೂಸ್ವಾಧೀನ ಪ್ರಕ್ರಿಯೆಯು ದೊಡ್ಡ ಹಗರಣವಾಗಿದೆ. ಅದರ, ವಿರುದ್ಧ ಜನಮತ ರೂಪಿಸುವ ಉದ್ದೇಶದಿಂದ ಬಂದ್‌ಗೆ ಕರೆ ನೀಡಲಾಗಿದೆ. ಭೂ ಸ್ವಾಧೀನ ಪ್ರಕರಣದಲ್ಲಿ ರೈತರಿಗೆ ನೀಡಲಾಗುತ್ತಿರುವ ಪರಿಹಾರ ಮೊತ್ತ ಅನ್ಯಾಯಕರವಾಗಿದ್ದು, ನ್ಯಾಯಯುತ ಭೂ ಬೆಲೆ ನೀಡಬೇಕು ಎಂಬ ಬೇಡಿಕೆಗೆ ಕಳೆದ 1267 ದಿನಗಳಿಂದ ಹೋರಾಟ ನಡೆಸಿದರೂ ಸರ್ಕಾರದಿಂದ ಯಾವುದೇ ಸ್ಪಂದನೆಯಿಲ್ಲ ಎಂದು ಕಿಡಿಕಾರಿದರು.
ಅಲ್ಲದೆ, ಸಿಐಟಿಯು, ಎಐಟಿಯುಸಿ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಇತರೆ ಪ್ರಗತಿಪರ ರೈತ, ಕಾರ್ಮಿಕ ಮತ್ತು ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸಂಘಟನೆಯ ಪದಾಧಿಕಾರಿಗಳಾದ ಚಾಣಪ್ಪ, ಕೃಷ್ಣಪ್ಪ, ಜಂಗ್ಲಿಸಾಬ್, ಬಾಬು, ಆನಂದ್, ಹುಸೇನಪ್ಪ ಇದ್ದರು.