ಕಂಪ್ಲಿ ತಾಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ತಾಲೂಕು ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್ ಚಾಲನೆ ನೀಡಿದರು. ತಾಪಂ ಇಒ ಆರ್.ಕೆ.ಶ್ರೀಕುಮಾರ್, ಪ್ರಮುಖರಾದ ಕೆ.ಎಸ್.ಮಲ್ಲನಗೌಡ, ಸಿ.ವಿಜಯಲಕ್ಷ್ಮೀ, ರೇಣುಕಮ್ಮ ಇತರರಿದ್ದರು. 
ಬಳ್ಳಾರಿ

ಗ್ಯಾರಂಟಿ ಯೋಜನೆಗಳಿಂದ ಆರ್ಥಿಕವಾಗಿ ಸಬಲರಾಗಿ

ಶಾಮಸುಂದರ್ ಕೊಪ್ಪಳಕರ್
ಕಂಪ್ಲಿ: ಮಹಿಳೆಯರು ಲಭ್ಯ ಅವಕಾಶಗಳನ್ನು ಬಳಸಿಕೊಂಡು ಎಲ್ಲ ಕ್ಷೇತ್ರಗಳಲ್ಲಿ ಮುನ್ನುಗ್ಗಿ ಸಮಾನತೆ ಸಾಧಿಸಬೇಕಿದೆ ಎಂದು ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್ ಹೇಳಿದರು.
ಮಹಿಳಾ ದಿನಾಚರಣೆ ನಿಮಿತ್ತ ತಾಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಮಹಿಳೆಯರು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕೆಂದು ತಿಳಿಸಿದರು.
ತಾಪಂ ಇಒ ಆರ್.ಕೆ.ಶ್ರೀಕುಮಾರ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಉನ್ನತ ಶಿಕ್ಷಣ, ಹುದ್ದೆ ಗಳಿಸುವಲ್ಲಿ ಮಹಿಳೆಯರು ಮುಂದಾಗಬೇಕು. ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಮಹಿಳೆಯರು ಪಾತ್ರ ಪ್ರಮುಖವಾಗಿದೆ ಎಂದರು. ಅಂಗನವಾಡಿ ಮೇಲ್ವಿಚಾರಕಿಯರಾದ ಲತೀಫಾ ಬೇಗಂ, ಎಮ್ಮಿಗನೂರಿನ ಎರ‌್ರೆಮ್ಮ ಇತರರು ಮಾತನಾಡಿ, ಅಸಂಘಟಿತ ಕಾರ್ಮಿಕ ವಲಯದಲ್ಲಿ ವೇತನ ತಾರತಮ್ಯವಿದ್ದು, ಮಹಿಳೆಯರಿಗೂ ಪುರುಷರಷ್ಟೇ ಸಮಾನ ವೇತನ ದೊರೆಯಬೇಕಿದೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಸಿ.ವಿಜಯಲಕ್ಷ್ಮೀ, ರೇಣುಕಮ್ಮ, ಎಂ.ರಾಜಭಕ್ಷಿ, ಅಧಿಕಾರಿಗಳಾದ ಕೆ.ಎಸ್.ಮಲ್ಲನಗೌಡ, ಶ್ರೀಶೈಲ ರೂಗಿ, ಜೆಸ್ಕಾಂ ಬಸಪ್ಪ, ದೇವರೆಡ್ಡಿ, ಕೆ.ವಿರೂಪಾಕ್ಷಗೌಡ, ಮೋಹನ್ ಕಾಳಾಪುರ, ಪಿಡಿಒ, ಗ್ರಾಪಂ ಕಾರ್ಯದರ್ಶಿಗಳು, ಸ್ವಸಹಾಯ ಸಂಘಗಳ ಅಧ್ಯಕ್ಷರು, ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರಿದ್ದರು.
ಬಲಿಜ ಮಹಿಳಾ ಸಂಘ: ಮಹಿಳೆಯರು ಪರಸ್ಪರ ಗೌರವಿಸುವ ಗುಣ ಅಳವಡಿಸಿಕೊಳ್ಳಬೇಕು ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಸಕಲೇಶ್ವರಿ ಅಕ್ಕ ಹೇಳಿದರು. ಪಟ್ಟಣದ ಶ್ರೀ ಯೋಗಿ ನಾರೇಯಣ ಯತೀಂದ್ರ ಭವನದಲ್ಲಿ ಬಲಿಜ ಮಹಿಳಾ ಸಂಘ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಮಕ್ಕಳಿಗೆ ಬಾಲ್ಯದಲ್ಲೇ ಲಿಂಗ ತಾರತಮ್ಯವಿಲ್ಲದೆ ಬೆಳೆಸಬೇಕು. ಅರ್ಥಪೂರ್ಣ ಜೀವನಕ್ಕೆ ಆತ್ಮ ಶಿಕ್ಷಣ ಅಗತ್ಯ ಎಂದರು.
ಬಲಿಜ ಮಹಿಳಾ ಸಂಘದ ಸ್ಥಳೀಯ ಘಟಕದ ಅಧ್ಯಕ್ಷೆ ಶಾರದಾ ಲೋಕೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರಿಗೆ ಕುಟುಂಬ, ಸಮಾಜದಲ್ಲಿ ಪರಿಪೂರ್ಣ ಸ್ವಾತಂತ್ರ್ಯ ದೊರೆಯಬೇಕಿದೆ. ಶಿಕ್ಷಣದಿಂದ ಉನ್ನತಿ ಸಾಧಿಸಲು ಸಾಧ್ಯ ಎಂದರು. ಪ್ರಮುಖರಾದ ಕೆ.ವಿದ್ಯಾ, ಉಮಾ, ಸುನಂದಮ್ಮ, ರೇಖಾ, ತೇಜಸ್ವಿನಿ, ಶ್ವೇತಾ, ಇಂಗಳಗಿ ನಾರಾಯಣಪ್ಪ, ಕವಿತಾಳ ಶಿವಕುಮಾರ ಇತರರಿದ್ದರು.