ಕೂಡ್ಲಿಗಿಯಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಎಸಿ ವಿವೇಕಾನಂದ, ತಹಸೀಲ್ದಾರ್ ವಿ.ಕೆ.ನೇತ್ರಾವತಿ, ತಾಪಂ ಇಒ ನರಸಪ್ಪ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಇದ್ದರು.
ನೀರಿನ ಕೊರತೆ ಆಗದಂತೆ ಎಚ್ಚರ ವಹಿಸಿ
ಕೂಡ್ಲಿಗಿ: ಬೇಸಿಗೆ ಆರಂಭವಾಗಿದ್ದು, ಜನರಿಗೆ ಕುಡಿವ ನೀರಿನ ಕೊರತೆ ಎದುರಾಗದಂತೆ ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಕ್ಷೇತ್ರದಲ್ಲಿನ 216 ಹಳ್ಳಿಗಳಲ್ಲಿ ಬೇಸಿಗೆಯಲ್ಲಿ ನೀರಿನ ತೊಂದರೆ ಆಗದಂತೆ ಯೋಜನೆ ತಯಾರಿಸಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ನೀರಿನ ಅಭಾವ ಎದುರಾಗಬಹುದು ಎಂದು ಈಗಲೇ ಪಟ್ಟಿ ಮಾಡಿ ಮುಂಜಾಗ್ರತೆ ವಹಿಸಿ ಎಂದು ತಾಕೀತು ಮಾಡಿದರು.
ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಎಷ್ಟಿದ್ದು, ಬೇಸಿಗೆಯಲ್ಲಿ ಸಮರ್ಪಕವಾಗಿ ನೀರಿನ ಸರಬರಾಜು ಆಗುತ್ತದೆಯೋ ಎಂಬುದನ್ನು ಗಮನಿಸಿ. ಪಿಡಿಒಗಳು ಕೊಳವೆ ಬಾವಿಗಳ ವಿದ್ಯುತ್ ಸಂಪರ್ಕ, ನೀರಿನ ಮಟ್ಟ ಹಾಗೂ ಪೈಪ್‌ಲೈನ್‌ಗಳ ದುರಸ್ತಿ ಕಾರ್ಯವನ್ನು ಈಗಲೇ ಪೂರ್ಣಗೊಳಿಸಬೇಕು. ಈ ವರ್ಷ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ಭರ್ತಿಯಾಗಿದ್ದು, ಅಂತರ್ಜಲ ಮಟ್ಟ ಹೆಚ್ಚಿದೆ. ನೀರಿನ ಸಮಸ್ಯೆ ಬಗ್ಗೆ ದೂರು ಬರದಂತೆ ಎಚ್ಚರ ವಹಿಸಿ ಎಂದರು.
ರೈತ ಸಂಘದ ರಾಜ್ಯಾಧ್ಯಕ್ಷ ಆರ್.ಮಾಧವರೆಡ್ಡಿ ಮಾತನಾಡಿ, ಅನೇಕ ಗ್ರಾಮಗಳಲ್ಲಿ ಸೋಲಾರ್ ಹಾಗೂ ಪವನ ವಿದ್ಯುತ್ ಕಂಪನಿಗಳು ರೈತರಿಗೆ ಅಲ್ಪ ಹಣದ ಆಮಿಷವೊಡ್ಡಿ ರೈತರ ಜಮೀನುಗಳನ್ನು ಕಂಪನಿ ಹೆಸರಲ್ಲಿ ನೋಂದಣಿ ಮಾಡಿಸುವ ಜತೆ ವ್ಯವಹಾರದಲ್ಲೂ ಅನ್ಯಾಯ ಮಾಡುತ್ತಿದ್ದಾರೆ. ಅಲ್ಲದೆ ರೈತರ ಜಮೀನಿನ ರಸ್ತೆ ಹಾಗೂ ಸರ್ವೇ ಕಲ್ಲುಗಳನ್ನು ನೆಲಸಮ ಮಾಡಿ ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ. ಇದಕ್ಕೆ ತಾಲೂಕು ಆಡಳಿತ ಹಾಗೂ ಶಾಸಕರು ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಕಳೆದ ಆರೇಳು ವರ್ಷಗಳಿಂದ ಪವನ ಯಂತ್ರ, ಸೋಲಾರ್ ವಿದ್ಯುತ್ ಕಂಪನಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕಾನೂನಿನಡಿ ವಿದ್ಯುತ್ ಯಂತ್ರಗಳ ಅಳವಡಿಕೆ ಅವಕಾಶ ನೀಡಲಾಗಿದೆ. ಆದರೆ, ಕೆಲ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿದೆ.
ಆದ್ದರಿಂದ ಮಧ್ಯವರ್ತಿಗಳ ಹಾವಳಿ ಹಾಗೂ ಕಂಪನಿಗಳ ಕಳ್ಳಾಟ ತಡೆಯಲು ಎಸಿ, ತಹಸೀಲ್ದಾರ್ ಹಾಗೂ ತಾಪಂ ಇಒ ನೇತೃತ್ವದಲ್ಲಿ ಸಮಿತಿ ರಚಿಸಿ ಯಾವುದೇ ಕಂಪನಿಗಳು ಮೊದಲು ಸಮಿತಿಯ ಒಪ್ಪಿಗೆ ಪಡೆಯುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಎಸಿ ವಿವೇಕಾನಂದ, ತಾಪಂ ಇಒ ನರಸಪ್ಪ, ತಹಸೀಲ್ದಾರ್ ವಿ.ಕೆ.ನೇತ್ರಾವತಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್, ಸಿಪಿಐ ಪ್ರಲ್ಹಾದ್ ಎಸ್.ಚನ್ನಗಿರಿ ಇದ್ದರು.