ಹರಪನಹಳ್ಳಿ ವಾಲ್ಮೀಕಿ ನಗರದ ಜಿಎಚ್‌ಪಿಎಸ್ ಶಾಲೆಯಲ್ಲಿ ಶಿಕ್ಷಕರು ಹಾಗೂ ಪಾಲಕರ ಸಭೆಯಲ್ಲಿ ಸಿಆರ್‌ಪಿ ಸಿ.ಮೈಲಾರಿ ಮಾತನಾಡಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಷಣ್ಮುಖಪ್ಪ, ಪ್ರೌಢಶಾಲಾ ವಿಭಾಗದ ಬಿಆರ್‌ಪಿ ಎಸ್. ನಾಗರಾಜ್, ಮುಖ್ಯ ಶಿಕ್ಷಕ ಸುನಿಲ್, ಶಿಕ್ಷಕರಾದ ಶಶಿಕಲಾ, ಅನಿತಾ ಇದ್ದರು. 
ಬಳ್ಳಾರಿ

ಮಕ್ಕಳ ಕೈಗೆ ಮೊಬೈಲ್ ಸಿಗದಂತೆ ಎಚ್ಚರ ವಹಿಸಿ

ಹರಪನಹಳ್ಳಿ: ಮಕ್ಕಳ ಕಲಿಕೆಯಲ್ಲಿ ಶಿಕ್ಷಕರು ಹಾಗೂ ಪಾಲಕರ ಸಹಕಾರ ಪ್ರಮುಖ ಪಾತ್ರ ವಹಿಸಲಿದೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಷಣ್ಮುಖಪ್ಪ ಹೇಳಿದರು.
ನಗರದ ವಾಲ್ಮೀಕಿ ನಗರದ ಜಿಎಚ್‌ಪಿಎಸ್ ಶಾಲೆಯಲ್ಲಿ ಶಿಕ್ಷಕ ಹಾಗೂ ಪಾಲಕರ ಸಭೆಯ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು. ಮಕ್ಕಳು ಶಾಲೆಯಲ್ಲಿ ಯಾವ ರೀತಿಯ ಶಿಕ್ಷಣ ಪಡೆಯುತ್ತಿದ್ದಾರೆ ಹಾಗೂ ಕಲಿಕೆಯಲ್ಲಿ ಪ್ರಗತಿ ಹೊಂದುತ್ತಿರುವ ಬಗ್ಗೆ ಶಿಕ್ಷಕರು ನಿಗಾ ವಹಿಸಿಬೇಕು. ಮನೆಯಲ್ಲಿ ಮಕ್ಕಳ ಶಿಕ್ಷಣದ ಬಗ್ಗೆ ಪಾಲಕರು ಕಾಳಜಿ ವಹಿಸಬೇಕು. ಮಕ್ಕಳ ಕೈಗೆ ಮೊಬೈಲ್ ಸಿಗದಂತೆ ಎಚ್ಚರ ವಹಿಸಿ ಎಂದು ಸಲಹೆ ನೀಡಿದರು.
ಪ್ರೌಢಶಾಲಾ ವಿಭಾಗದ ಬಿಆರ್‌ಪಿ ಎಸ್.ನಾಗರಾಜ್ ಮಾತನಾಡಿ, ಪಾಲಕರು ಮತ್ತು ಶಿಕ್ಷಕರು ಮಕ್ಕಳ ಕಲಿಕೆ ಬಂಡಿಯ ಎರಡು ಚಕ್ರಗಳಿದ್ದಂತೆ. ಎರಡೂ ಸಮನಾಗಿ ಚಲಿಸಿದರೆ ಮಾತ್ರ ಮಕ್ಕಳ ಶಿಕ್ಷಣ ಒಂದು ನೆಲೆ ಸೇರಲು ಸಾಧ್ಯ ಎಂದರು. ಸಿಆರ್‌ಪಿ ಸಿ.ಮೈಲಾರಿ ಮಾತನಾಡಿ, ಪಾಲಕರ ಸಭೆ ಮಕ್ಕಳ ಶೈಕ್ಷಣಿಕ ಪ್ರಗತಿ, ಶಿಸ್ತು, ಮತ್ತು ಸರ್ವತೋಮುಖ ಬೆಳವಣಿಗೆ ಕುರಿತು ಚರ್ಚಿಸಲು ಶಿಕ್ಷಕರು ಹಾಗೂ ಪಾಲಕರ ನಡುವೆ ಪ್ರಮುಖ ಕೊಂಡಿಯಾಗಿದೆ. ಶಾಲೆಯಲ್ಲಿ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಬೇಕಾದಲ್ಲಿ ಪಾಲಕರ ಪಾತ್ರ ಅತಿ ಮುಖ್ಯವಾಗಿದೆ ಎಂದರು. ಶಿಕ್ಷಕರಾದ ಜ್ಯೋತಿ, ದುರುಗೇಶ್, ಮಂಜುಳಾ, ರೇಣುಕಾ ಇತರರಿದ್ದರು.