ಹೂವಿನಹಡಗಲಿ ತಾಪಂ ರಾಜೀವಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ್ದ ಬರ ನಿರ್ವಹಣೆ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಶಾಸಕ ಎಲ್.ಕೃಷ್ಣನಾಯ್ಕ ಮಾತನಾಡಿದರು. ತಹಸೀಲ್ದಾರ್ ಕೆ.ಎಂ.ಗುರುಬಸವರಾಜ, ತಾಪಂ ಇಒ ಜಿ.ಪರಮೇಶ್ವರ ಇದ್ದರು. 
ಬಳ್ಳಾರಿ

ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ

ಶಾಮಸುಂದರ್ ಕೊಪ್ಪಳಕರ್

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಶಾಸಕ ಎಲ್.ಕೃಷ್ಣನಾಯ್ಕ ಸೂಚನೆ
  • ಟಾಸ್ಕ್‌ಫೋರ್ಸ್ ಸಭೆ
ಹೂವಿನಹಡಗಲಿ: ಈ ಬಾರಿ ಮುಂಗಾರು ಕೈಕೊಟ್ಟ ಕಾರಣ ತಾಲೂಕಿನಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಧಿಕಾರಿಗಳು ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಎಲ್.ಕೃಷ್ಣನಾಯ್ಕ ಹೇಳಿದರು.
ಪಟ್ಟಣದ ತಾಪಂ ರಾಜೀವಗಾಂಧಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಬರ ನಿರ್ವಹಣೆ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಸೋರಿಕೆ, ಕೊಳವೆ ಬಾವಿ, ಜಲ ಸಂಗ್ರಹಗಾರಗಳ ದುರಸ್ತಿ ಕಾರ್ಯ ಸೇರಿ ಇನ್ನು ಅನೇಕ ಸಮಸ್ಯೆಗಳಿದ್ದು ಅಧಿಕಾರಿಗಳು ಅವುಗಳಲ್ಲಿನ ದೋಷಗಳನ್ನು ಸರಿಪಡಿಸಬೇಕು. ಕೊನೆ ಹಂತದಲ್ಲಿ ಅಧಿಕಾರಿಗಳು ತಾಂತ್ರಿಕ ದೋಷದ ನೆಪ ಏಳಿ ಜಾರಿಕೊಳ್ಳಬಾರದು.
ಜೆಸ್ಕಾಂ ಇಲಾಖೆಯಿಂದ ಕುಡಿಯುವ ನೀರಿನ ಪಂಪ್‌ಸೆಟ್‌ಗಳಿಗೆ 24*7 ನಿರಂತರ ಜ್ಯೋತಿ ಮೂಲಕ ವಿದ್ಯುತ್ ಸರಬರಾಜು ಮಾಡಬೇಕು. ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕಕ್ಕೆ ಕೆಲವರು ಕೊಂಡಿ ಹಾಕಿದ್ದು ಅದನ್ನು ಕೂಡಲೇ ಅಧಿಕಾರಿಗಳು ತೆರವುಗೊಳಿಸಬೇಕು. ತಾಲೂಕಿನಲ್ಲಿನ ಕೆರೆಗಳಿಗೆ ಸಿಂಗಟಾಲೂರು ಏತನೀರಾವರಿ ಯೋಜನೆಯ ಬ್ಯಾರೇಜ್‌ನಿಂದ ಸಮರ್ಪಕವಾಗಿ ನೀರು ಹರಿಸಬೇಕು. ತಾಲೂಕಿನ ಯಾವ ಭಾಗದಲ್ಲಿ ನೀರಿನ ಕೊರೆತ ಇದೆಯೋ ಆ ಭಾಗದಲ್ಲಿ ಕೂಡಲೇ ಕಾಲುವೆ ಮೂಲಕ ಇಲ್ಲವೇ ಪೈಪ್‌ಲೈನ್ ಮೂಲಕ ನೀರು ಹರಿಸಬೇಕು. ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶದಲ್ಲಿ ಈವರೆಗೆ 29514 ಹೆ.ಪ್ರದೇಶದಲ್ಲಿ ಅಂದರೆ ಶೇ.47 ಬಿತ್ತನೆಯಾಗಿದ್ದು, ಇದರಲ್ಲಿ ಶೇ.40 ಪ್ರದೇಶ ನೀರಾವರಿ ಜಮೀನು ಸೇರಿದೆ. ಇದಕ್ಕೆ ಸಂಬಂಧಿಸಿದಂತೆ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಮನವೊಲಿಸಿ ಕನಿಷ್ಠ ಶೇ.90ಬೆಳೆ ವಿಮೆ ಮಾಡಿಸಬೇಕು ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಕೆ.ಟಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ನಾಗರಾಜ ಇತರರಿದ್ದರು.