ಬಳ್ಳಾರಿಯ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾ.ರಾಜೇಶ್ ಎನ್.ಹೊಸಮನೆ ಉದ್ಘಾಟಿಸಿದರು. ವಕೀಲರ ಸಂಘದ ಜಿಲ್ಲಾಧ್ಯಕ್ಷ ರಾಮಬ್ರಹ್ಮಂ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಸಕೀನ ಇದ್ದರು.
- ಗ್ರಾಹಕರ
- ಜಿಲ್ಲಾಡಳಿತ
- ಸಾರ್ವಜನಿಕ
ಬಳ್ಳಾರಿ: ಸಮಾಜದಲ್ಲಿ ಡಿಜಿಟಲ್ ಖರೀದಿ ಹೆಚ್ಚಾಗಿದ್ದು, ಆನ್‌ಲೈನ್ ವಂಚನೆಗಳು ಹೆಚ್ಚುತ್ತಿವೆ. ಈ ಕುರಿತು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಆಹಾರ ಸುರಕ್ಷತಾ ಇಲಾಖೆ ಡಿಜಿಟಲ್ ನ್ಯಾಯದ ಮೂಲಕ ಕಾರ್ಯಕ್ರಮ ಮತ್ತು ತ್ವರಿತ ನ್ಯಾಯ ವಿತರಣೆ ಎಂಬ ಘೋಷವಾಕ್ಯದಡಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಹಕರು ತಮಗಿರುವ ಹಕ್ಕುಗಳ ಬಗ್ಗೆ ಜವಾಬ್ದಾರಿ ಮತ್ತು ಅರಿವು ಹೊಂದಬೇಕು ಎಂದು ಹೇಳಿದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ರಾಮಬ್ರಹ್ಮಂ ಮಾತನಾಡಿ, ಹಣ ನೀಡಿ ಪಡೆಯುವ ಪ್ರತಿಯೊಂದು ವಸ್ತುವಿನ ಗುಣಮಟ್ಟ, ಬೆಲೆ, ದಿನಾಂಕ, ಮುಕ್ತಾಯಗೊಳ್ಳುವ ದಿನ ಸೇರಿದಂತೆ ಎಲ್ಲಾ ಅಂಶಗಳನ್ನು ಪರಿಶೀಲಿಸುವ ಮೂಲಕ ವಸ್ತುವಿನ ಗುಣಮಟ್ಟ ಖಾತ್ರಿಪಡಿಸಿಕೊಳ್ಳಬೇಕು. ಗ್ರಾಹಕರಿಗಿರುವ ಹಕ್ಕು, ಕಾಯ್ದೆಗಳ ಕುರಿತು ಶಾಲೆ, ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದರು.
ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಮನೋಜ್ ಕುಮಾರ್ ಮಾತನಾಡಿ, ಗ್ರಾಹಕರು ಮೋಸದ ಬಗ್ಗೆ ಸಂಶಯ ಕಂಡುಬಂದಲ್ಲಿ ಅದನ್ನು ಖಚಿತಪಡಿಸಿಕೊಳ್ಳುವ ಹಕ್ಕಿದೆ. ಹಾಗಾಗಿ ಪ್ರತಿ ತೂಕದ ಯಂತ್ರಗಳನ್ನು ಪರಿಶೀಲನೆ ಮಾಡಿ ವಸ್ತುಗಳ ಖರೀದಿ ಮಾಡಬೇಕು. ಪದಾರ್ಥಗಳ ನಿವ್ವಳ ತೂಕವನ್ನು 1ಕೆಜಿ ಗೆ ಎಷ್ಟು ಗ್ರಾಂ ಬರುತ್ತದೆ ಮತ್ತು ವಸ್ತುಗಳ ಮೇಲೆ ಬರೆದಿರುವ ವಿಷಯವನ್ನು ಗ್ರಾಹಕರು ತಿಳಿದಿರಬೇಕು ಎಂದು ಹೇಳಿದರು.