ಬಳ್ಳಾರಿಯ ಜಿಲ್ಲಾ ನ್ಯಾಯಾಲಯದಲ್ಲಿ ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮ ನಡೆಯಿತು. ನ್ಯಾಯಾಧೀಶರಾದ ಸಿದ್ಧಲಿಂಗ ಪ್ರಭು, ರಾಜೇಶ್ ಎನ್.ಹೊಸಮನೆ, ತರಬೇತುದಾರ ಎಚ್.ವೆಂಕಟೇಶ್, ವಕೀಲರಾದ ಹೊನ್ನುರ ಸಾಬ್, ಲಿಂಗರೆಡ್ಡಿ, ಹನುಮಂತು ಇತರರಿದ್ದರು.
- ಸಮಾಜಮುಖಿ ಸೇವೆಗೆ ಸಜ್ಜಾಗು
- ತಿದ್ದುಪಡಿಗಳ ಬಗ್ಗೆ ಸದಾ ಜಾಗೃತ
ಕಾನೂನು ನಿಂತ ನೀರಲ್ಲ, ಅದು ನಿರಂತರ ಬದಲಾವಣೆಗೆ ಒಳಪಡುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ವಕೀಲರ ಸಂಘ ಸಹಯೋಗದೊಂದಿಗೆ ಜಿಲ್ಲೆಯ ಪ್ಯಾರಾ ಲೀಗಲ್ ಸ್ವಯಂ ಸೇವಕರಿಗೆ ಗುರುವಾರ ಆಯೋಜಿಸಿದ್ದ ಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಾಗಾಗಿ ಸ್ವಯಂಸೇವಕರು ಹೊಸ ಕಾಯ್ದೆಗಳು ಮತ್ತು ತಿದ್ದುಪಡಿಗಳ ಬಗ್ಗೆ ಸದಾ ಜಾಗೃತರಾಗಿರಬೇಕು. ಇಂತಹ ತರಬೇತಿಗಳು ಸಮರ್ಪಕವಾಗಿ ಬಳಸಿಕೊಂಡು, ಅನುಮಾನಗಳನ್ನು ಪರಿಹರಿಸಿಕೊಂಡು ಸಮಾಜಮುಖಿ ಸೇವೆಗೆ ಸಜ್ಜಾಗುವಂತೆ ಸ್ವಯಂಸೇವಕರಿಗೆ ಕಿವಿಮಾತು ಹೇಳಿದರು.
ಸಂವಿಧಾನದ ಆಶಯದಂತೆ ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಒದಗಿಸುವುದು ಕಾನೂನು ಸೇವಾ ಪ್ರಾಧಿಕಾರದ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪ್ಯಾರಾ ಲೀಗಲ್ ಸ್ವಯಂಸೇವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನು ನೆರವು ತಲುಪಿಸುವ ನಿಟ್ಟಿನಲ್ಲಿ ಪ್ಯಾರಾ ಲೀಗಲ್ ಸ್ವಯಂಸೇವಕರು ನ್ಯಾಯ ವಂಚಿತರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಕೇವಲ ವಿದ್ಯಾವಂತರು ಅಥವಾ ಹಣವಂತರಿಗೆ ಮಾತ್ರವಲ್ಲದೆ ಬಡವರು, ನಿರ್ಗತಿಕರು ಮತ್ತು ಅಸಹಾಯಕರ ಪರವಾಗಿ ನಿಂತು ಅವರಿಗೆ ಕಾನೂನು ನ್ಯಾಯ ಒದಗಿಸುವುದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಗುರಿಯಾಗಿದೆ. ನೆರವು ಕೋರಿ ಬರುವ ಸಂತ್ರಸ್ತರು ಹಾಗೂ ದುರ್ಬಲರು ಹಂಚಿಕೊಳ್ಳುವ ವೈಯಕ್ತಿಕ ವಿಚಾರಗಳನ್ನು ಅತ್ಯಂತ ಗೌಪ್ಯವಾಗಿಡುವುದು ಪ್ರತಿಯೊಬ್ಬ ಸ್ವಯಂಸೇವಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಎಚ್.ವೆಂಕಟೇಶ್ ತರಬೇತಿ ನೀಡಿದರು.