ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ಬಸವೇಶ್ವರ ಜಯಂತಿ ಆಚರಿಸಲಾಯಿತು. ಪ್ರೊ.ತಿಪ್ಪೇಸ್ವಾಮಿ, ಪ್ರೊ. ತಿಪ್ಪೇರುದ್ರಪ್ಪ ಜೆ., ಸಿಬ್ಬಂದಿ ಬಾಸ್ಕರ್ ರಾವ್, ಹನುಮಂತು, ವೀರೇಶ್, ರಾಜೇಂದ್ರ ಇತರರಿದ್ದರು
ಬಳ್ಳಾರಿ : ಬಸವಣ್ಣ ಅವರು ಸಮ ಸಮಾಜ ನಿರ್ಮಾಣದ ಕನಸು 12ನೇ ಶತಮಾನದಲ್ಲಿ ಬಿತ್ತಿದರು. ಆದರೆ ಇಂದಿಗೂ ಅವರ ತತ್ವಾದರ್ಶಗಳನ್ನು ಪಾಲಿಸಲು ಎಡವುತ್ತಿದ್ದೇವೆ ಎಂದು ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರೊ.ತಿಪ್ಪೇಸ್ವಾಮಿ ಹೇಳಿದರು.
ನಗರದ ವಿಎಸ್‌ಕೆ ವಿವಿಯಲ್ಲಿ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಘಟಕದ ವತಿಯಿಂದ ಸೋಮವಾರ ಆಯೋಜಿಸಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವುದೇ ವ್ಯಕ್ತಿ, ಜಾತಿ, ಧರ್ಮಕ್ಕಿಂತ ದಯೆ ಎಂಬುದೇ ಶ್ರೇಷ್ಠವಾದದ್ದು. ಕಾಯಕ ಮಾಡುತ್ತ ಅದರಲ್ಲೇ ಕೈಲಾಸ ಕಂಡುಕೊಳ್ಳುವ ಪರಿಪಾಠವನ್ನು ಮನುಷ್ಯರು ಬೆಳೆಸಿಕೊಳ್ಳಲು ಉತ್ತೇಜಿಸಿರುವುದು ಅವರ ದೂರದೃಷ್ಟಿಗೆ ಹಿಡಿದ ಕೈಗನ್ನಡಿಯಾಗಿದೆ. ಸ್ತಿಥ ಸಮಾನತೆ, ವಚನ ಚಳುವಳಿಗಳ ಮೂಲಕ ಸಮಾಜಕ್ಕೆ ಅರಿವು ಮೂಡಿಸಲು ನಿರಂತರವಾಗಿ ಶ್ರಮಿಸಿದರು ಎಂದರು.
ಕಾರ್ಯಕ್ರಮದ ಸಂಯೋಜಕ ಡಾ.ಕೆ.ಸಿ. ಪ್ರಶಾಂತ್ ಮಾತನಾಡಿ, ಬಸವಣ್ಣ ಅವರು ಕೇವಲ ಜಗತ್ತಿನ ಸುಧಾರಣೆಗೆ ಮಾತ್ರ ಸೀಮಿತವಾಗದೆ ತನ್ನ ದೋಷವ ತಾನು ನೋಯುವುದೇ ಜ್ಞಾನ ಎಂಬ ಧ್ಯೇಯಕ್ಕೆ ಬದ್ಧರಾಗಿದ್ದರು. ಕಾಯಕ, ದಾಸೋಹ, ಸಮಾನತೆಯನ್ನು ದೈನಂದಿನ ಜೀವನದಲ್ಲಿ ಪ್ರತಿಯೊಬ್ಬ ಮನ್ಯಷ್ಯನು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಬಸವೇಶ್ವರರ ಕನಸಾದ ಸಮರಸದ ಜೀವನ ಪುನರುತ್ಥಾನಗೊಳಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.