ಬಳ್ಳಾರಿ : ನಗರದ ಕೌಲಬಜಾರ್ ಪ್ರದೇಶದಲ್ಲಿ ಅಕ್ರಮವಾಗಿ ಬಾಂಗ್ಲಾದೇಶದ ಹತ್ತು ಸಾವಿರಕ್ಕೂ ಅಧಿಕ ನಿವಾಸಿಗಳು ವಾಸವಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಗಂಭೀರ ಆರೋಪಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕು. ಜಿಲ್ಲೆಯಲ್ಲಿಯೂ ಡ್ರಗ್ಸ್ ಹಾವಳಿ ಹೆಚ್ಚಿದೆ. ಇದರ ಜತೆ ಗ್ರಾಮೀಣ ಪ್ರದೇಶದಲ್ಲಿ ಮಟ್ಕಾ, ಜೂಜಾಟ, ಗಾಂಜಾ ಮಾರಾಟ, ಮರಳು ದಂಧೆ ಎಗ್ಗಿಲ್ಲಿದೆ ಸಾಗುತ್ತಿದ್ದು, ಪೊಲೀಸರು ನಿಷ್ಕ್ರಿಯರಾಗಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಈಗಾಗಲೇ ವಾಲ್ಮೀಕಿ ಪ್ರತಿಮೆ ಅನಾವರಣಗೊಂಡಿದ್ದು, ಮತ್ತೊಂದು ಪುತ್ಥಳಿ ಅವಶ್ಯಕತೆ ಇದ್ದಿಲ್ಲ ಎಂದು ಹೇಳಿದರು.
ಯಲಹಂಕದ ಕೋಗಿಲು ಲೇಔಟ್‌ನಲ್ಲಿ ಸಂತ್ರಸ್ಥರಿಗೆ ರಾಜ್ಯ ಸರ್ಕಾರ ವಸತಿ ನಿರ್ಮಾಣದ ಭರವಸೆ ನೀಡಿದ್ದು, ಅವರ ಹಿನ್ನೆಲೆ ಪರಿಶೀಲಿಸಬೇಕು. ರಾಜ್ಯದ ಹಲವು ಕಡೆ ಸ್ಥಳ ಸರ್ಕಾರಿ ಸ್ಥಳ ಒತ್ತುವರಿ ಮಾಡಿಕೊಂಡಿದೆ. ಆದರೆ, ಕೋಗಿಲು ಪ್ರದೇಶದ ಜನದ ಮೇಲೆ ಸಾಫ್ಟ ಕಾರ್ನರ್ ಉಳಿದವರ ಮೇಲೆ ಏಕಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ್ ರಾಜ್ಯದ ಸೂಪರ್ ಸಿಎಂಯಾಗಿದ್ದರು. ಇದೀಗ ಅವರ ಸ್ಥಾನವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ತುಂಬಿದ್ದಾರೆ. ಕೇರಳದಲ್ಲಿ ಅಲ್ಪ ಸಂಖ್ಯಾತ ಮತಗಳು ಬಿಟ್ಟು ಹೋಗುತ್ತಿವೆ ಎಂಬುದಕ್ಕೆ ಇಷ್ಟೇಲ್ಲಾ ಹೈಡ್ರಾಮ ನಡೆಯುತ್ತಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಎಲ್ಲದಕ್ಕೂ ಓಕೆ ಎನ್ನುತ್ತಾರೆ. ಆದರೆ, ಕೆಲಸ ಮಾಡಲ್ಲ . ಸಚಿವ ಕೃಷ್ಣಬೈರೇಗೌಡ ಕ್ಷೇತದಲ್ಲೇ ಇಷ್ಟು ನಡೆದಿದೆ ಎಂದರೆ ಅವರಿಗೆ ತಿಳಿಯದೆ ಇರುವುದಿಲ್ಲ ಎಂದು ಲೇವಡಿ ಮಾಡಿದರು.
ಬೆಂಗಳೂರಿನಲ್ಲನ ಡ್ರಗ್ಸ್ ಫ್ಯಾಕ್ಟರಿಯನ್ನು ಮಹಾರಾಷ್ಟ್ರ ಪೊಲೀಸರು ವಶಪಡಿಸಿಕೊಳ್ಳುತ್ತಾರೆ. ಆದರೆ, ಇಲ್ಲಿನ ಸರ್ಕಾರ ನಿದ್ದೆಮಾಡುತ್ತಿದೆ ಎಂದು ವ್ಯಂಗವಾಡಿದರು. ಕರ್ನಾಟಕ ಶೀಘ್ರದಲ್ಲೇ ಪಂಜಾಬ್ ಮಾದರಿಯಲ್ಲಿ ಉಡ್ತಾ ಕರ್ನಾಟಕವಾಗಲಿದೆ. ರಾಜ್ಯ ಗೃಹ ಮಂತ್ರಿ ಜಿ.ಪರಮೇಶ್ವರ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಯಡಿಯೂರಪ್ಪ ನಿರ್ಧಾರ ಮಾಡಲಿದ್ದಾರೆ ಎಂದರು. ಮುಖಂಡರಾದ ಶ್ರೀನಿವಾಸ್ ಮೋತ್ಕರ್, ಇಬ್ರಾಹಿಂಬಾಬು, ಹನುಮಂತು, ಶ್ರೀಧರ ಇದ್ದರು.