ಬಳ್ಳಾರಿಯ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಮಾತನಾಡಿದರು. ಎಡಿಸಿ ಮಹಮ್ಮದ್ ಎನ್.ಜುಬೇರ್ ಇದ್ದರು. 
ಬಳ್ಳಾರಿ

ದಾಖಲೆಯೊಂದಿಗೆ ಸಭೆಗೆ ಹಾಜರಾಗಿ

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ಸುಮೈರ್ ಹೇಳಿಕೆ
  • ಪ್ರವಾಸ ಜತೆಗೆ ಪ್ರಗತಿ ಪರಿಶೀಲನಾ ಸಭೆ
ಬಳ್ಳಾರಿ : ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ ಅವರು ಮೇ18ರಂದು ಜಿಲ್ಲಾ ಪ್ರವಾಸ ಜತೆಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪೂರಕ ಮಾಹಿತಿಯೊಂದಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಗೆ ಆಯೋಗದ ಅಧ್ಯಕ್ಷ ಭೇಟಿ ಹಿನ್ನೆಲೆ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಎಸ್‌ಸಿ, ಎಸ್ಟಿ ಸಮುದಾದ ಅಭಿವೃದ್ಧಿಗೆ ಮೀಸಲಿಟ್ಟಿ ಅನುದಾನದ ವರದಿ ಹಾಗೂ ಕಾಮಗಾರಿಗಳ ವಿವರ ಸಿದ್ಧವಾಗಿಟ್ಟುಕೊಳ್ಳಬೇಕು.
ಎಸ್ಸಿ ಎಸ್ಪಿ-ಟಿಎಸ್ಪಿ ಅನುದಾನ ಯಾವುದೇ ಕಾರಣಕ್ಕೂ ವಿಳಂಬ ಮಾಡದೆ, ನಿಗದಿತ ಅವಧಿಯೊಳಗೆ ಸಮರ್ಪಕವಾಗಿ ಬಳಕೆ ಮಾಡಬೇಕು. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಮತ್ತು ವಿತರಿಸಲಾದ ಸೌಲಭ್ಯಗಳ ಬಗ್ಗೆ ನಿಖರವಾದ ಅಂಕಿ ಅಂಶಗಳೊಂದಿಗೆ ಮಾಹಿತಿ ಒದಗಿಸಬೇಕು. ಯಾವುದೇ ಸೌಲಭ್ಯ ನೀಡುವಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದರು.
ಜಿಲ್ಲೆಯ ನಗರ- ಸ್ಥಳೀಯ ಸಂಸ್ಥೆಗಳಲ್ಲಿ ಎಸ್ಸಿಎಸ್ಪಿ-ಟಿಎಸ್ಪಿ ಅನುದಾನ ಬಳಕೆಯಾಗದೇ ಇರುವುದು ಕಂಡುಬಂದಲ್ಲಿ, ಸಂಬಂಧಿಸಿದ ಮುಖ್ಯಾಧಿಕಾರಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಬೇಕು ಎಂದು ನಿರ್ದೇಶಿಸಿದರು.