ಕುಮಾರ್ ಸಮಾತಾಲ್ 
ಬಳ್ಳಾರಿ

ಎಸ್‌ಐಆರ್ ಮತದಾನ ಕಸಿಯುವ ಯತ್ನ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ರಾಜ್ಯಾದ್ಯಂತ ತೀವ್ರ ಹೋರಾಟ

ಬಳ್ಳಾರಿ :

ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಜೀವಂತ ಮತದಾರರ ಹೆಸರನ್ನೇ ಮತದಾರರ ಪಟ್ಟಿಯಿಂದ ತೆಗೆದುಹಾಕುವ ಮೂಲಕ ಕೋಟ್ಯಂತರ ಜನರ ಮತದಾನದ ಹಕ್ಕು ಕಸಿಯುವ ಪ್ರಯತ್ನ ನಡೆಯುತ್ತಿದೆ ಎಂದು ಎದ್ದೇಳು ಕರ್ನಾಟಕ ಸಂಘದ ವಿಭಾಗದ ಸಂಚಾಲಕ ಕುಮಾರ್ ಸಮಾತಾಲ್ ಆರೋಪಿಸಿದರು.

ನಗರದ ಪತ್ರಿಕಾಭವನದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚುನಾವಣಾ ಆಯೋಗವೇ ಪ್ರಕಟಿಸಿರುವ ಅಂಕಿ-ಅಂಶಗಳ ಪ್ರಕಾರ ರಾಜ್ಯದ 1,10,59,288 ಮತದಾರರು ಡಿಲೀಟ್ ಪಟ್ಟಿಯಲ್ಲಿ ಇದ್ದು, ಇದು ಒಟ್ಟು ಮತದಾರರ ಸುಮಾರು ಶೇ.20ರಷ್ಟುಯಾಗಿದೆ. ಈ ಪ್ರಕ್ರಿಯೆ ಮುಂದುವರಿದರೆ ಪ್ರತಿ ಐದು ಮತದಾರರಲ್ಲಿ ಒಬ್ಬರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೆಂಗಳೂರು ಸೇರಿದಂತೆ ವಲಸೆ ಹೆಚ್ಚಿರುವ ಹಾಗೂ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ ಡಿಲೀಟ್ ಪಟ್ಟಿಯಲ್ಲಿರುವ ಬಹುತೇಕರು ಶಿಫ್ಟೆಡ್ ಹಾಗೂ ಅಬ್ಸೆಂಟ್ ವರ್ಗಕ್ಕೆ ಸೇರಿದ್ದಾರೆ. ಅವರು ಸತ್ತವರೂ ಅಲ್ಲ, ನಕಲಿ ಮತದಾರರೂ ಅಲ್ಲ. ಉದ್ಯೋಗ, ಶಿಕ್ಷಣ ಅಥವಾ ಇತರೆ ಕಾರಣಗಳಿಂದ ಬೇರೆಡೆಗೆ ತೆರಳಿರುವ ಜೀವಂತ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವುದು ಅಸಂವಿಧಾನಿಕ ಮತ್ತು ಅಪ್ರಜಾತಾಂತ್ರಿಕ ಕ್ರಮವಾಗಿದೆ ಎಂದು ಹೇಳಿದರು.
ಚುನಾವಣಾ ಆಯೋಗ ನಾಗರಿಕ ಸಮಾಜದ ಅಭಿಪ್ರಾಯಗಳನ್ನು ನಿರ್ಲಕ್ಷಿಸಿ, ಅಕ್ರಮ ಡಿಲೀಷನ್ ಪ್ರಕ್ರಿಯೆ ಮುಂದುವರಿಸಿದರೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಪದಾಧಿಕಾರಿಗಳಾದ ಆರ್.ಮಾಧವ ರೆಡ್ಡಿ, ಎಲ್. ಮಾರಣ್ಣ, ಯರುಕಾಲ ಸ್ವಾಮಿ, ಹುಸೇನಪ್ಪ ಸಮಂತಾ, ಹುಸೇನ್ ಸಾಬ್ ಅಯೂಬ್, ಓಂಕಾರಪ್ಪ, ರಫೀಕ್, ಎನ್.ಡಿ.ವೆಂಕಮ್ಮ ಇದ್ದರು.