ಸಹಾಯಕ ವಾಣಿಜ್ಯ ತೆರಿಗೆ ಆಯುಕ್ತ ಲೋಕಾಯುಕ್ತ ಬಲೆಗೆ
- ಜಿಎಸ್‌ಟಿ ವರ್ಗಾವಣೆಗೆ ಲಂಚ
- ನಗದು ಸಹಿತ ವಶ
ಬಳ್ಳಾರಿ : ಜಿಎಸ್‌ಟಿ ವರ್ಗಾವಣೆಗೆ ಲಂಚ ಬೇಡಿಕೆಯಿಟ್ಟಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ವಾಣಿಜ್ಯ ತೆರಿಗೆ ಆಯುಕ್ತ (ಎಸಿಟಿಸಿ) ಮಲ್ಲಿಕಾರ್ಜುನ ಕುಬಸದ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ನಗರದ ರಾಘವೇಂದ್ರ ಕಾಲನಿಯಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿಯಲ್ಲಿ ದೂರುದಾರರಿಂದ 90 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಯನ್ನು ನಗದು ಸಹಿತ ವಶಕ್ಕೆ ಪಡೆದಿದ್ದಾರೆ.
ಸಿರಗುಪ್ಪ ನಿವಾಸಿ ಶ್ರೀನಿವಾಸ್ ರಾವ್ ಎಂಬುವವರ ಹಳೆಯ ಜಿಎಸ್‌ಟಿ ಸಂಖ್ಯೆಯು ತಾಂತ್ರಿಕ ದೋಷದಿಂದಾಗಿ ಮೈಗ್ರೇಟ್ ಆಗಿರಲಿಲ್ಲ. ಹೀಗಾಗಿ ಆ ಹಳೆಯ ಖಾತೆಯಲ್ಲಿದ್ದ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಅನ್ನು ಹೊಸ ಜಿಎಸ್‌ಟಿ ಸಂಖ್ಯೆಗೆ ವರ್ಗಾಯಿಸಿಕೊಡುವಂತೆ ಶ್ರೀನಿವಾಸ್ ರಾವ್ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ಅಧಿಕಾರಿ ಮಲ್ಲಿಕಾರ್ಜುನ ಕುಬಸದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲೋಕಾಯುಕ್ತ ಎಸ್‌ಪಿ ಎನ್. ವಾಸುದೇವರಾಮ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಗುರಣ್ಣ ಎಸ್. ಹೆಬ್ಬಾಳ್ ನೇತೃತ್ವದ ತಂಡ ಈ ಯಶಸ್ವಿ ದಾಳಿ ನಡೆಸಿದೆ. ಆರೋಪಿತ ಅಧಿಕಾರಿಯನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ.=